ಭಟ್ಕಳದಲ್ಲಿ ಜಿಲ್ಲಾಧಿಕಾರಿ ಕಾರು ತಡೆದ ಪ್ರತಿಭಟನಾಕಾರರು

23bkl1_A (1)
Published on

ವಿಜಯವಾಣಿ ಸಉದ್ದಿಜಾಲ ಭಟ್ಕಳ

ತಮಗೆ ಪರಿಶಿಷ್ಟ ಜಾತಿ ಸೌಲಭ್ಯವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಭಟ್ಕಳ ಮೊಗೇರ ಸಮುದಾಯದವರು ನಡೆಸಿರುವ ಪ್ರತಿಭಟನೆ 1 ವರ್ಷಕ್ಕೆ ಕಾಲಿರಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸಮಾಜದವರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಕಾರು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ವೆಂಕಟಾಪುರದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಳೆದ 15 ವರ್ಷಗಳಿಂದ ಭಟ್ಕಳ ತಾಲೂಕಿನ ಮೊಗೇರ ಸಮುದಾಯ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ. ಉಚ್ಚನ್ಯಾಯಲಯ, ಕೇಂದ್ರ ಪರಿಶಿಷ್ಟ ಜಾತಿ ಪಂಗಡ ಆಯೋಗ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆದೇಶಿಸಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಅದಕ್ಕೆ ತಡೆ ಹಾಕಿ ನಿಂತಿದೆ. ರಾಜ್ಯ ಸರ್ಕಾರದ ಈ ಧೋರಣೆ ವಿರುದ್ದ ನ್ಯಾಯ ದೊರೆಯುವವರೆಗೂ ಕಾನೂನಾತ್ಮಕ ಸೌಲಭ್ಯಕ್ಕಾಗಿ ಹೋರಾಟ ಒಂದು ವರ್ಷ ಮಾತ್ರವಲ್ಲ ನ್ಯಾಯ ದೊರೆಯುವವರೆಗೂ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು
ಸ್ಥಳಕ್ಕೆ ದೌಡಾಯಿಸಿದ ಡಿಸಿ, ಎಸ್‌ಪಿ
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಎಸ್ ಪಿ ಎನ್‌.ವಿಷ್ಣುವರ್ಧನ ಸ್ಥಳಕ್ಕೆ ದೌಡಾಯಿಸಿದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮುಖಂಡರ ಸಭೆ ನಡೆಸಿ 15 ದಿನದ ಒಳಗೆ ಸಮಿತಿ ನಿರ್ಧಾರವನ್ನು ಸರ್ಕಾರಕ್ಕೆ ತಿಳಸಲಿದ್ದು ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.
ಡಿಸಿ ಕಾರ್‌ಗೆ ಮುತ್ತಿಗೆ:
ಪ್ರತಿಭಟನೆಯಲ್ಲಿ ಮೊಗೇರ ಸಮಾಜದ ಅಹವಾಲು ಆಲಿಸಿ, ಮುಖಂಡರ ಸಭೆ ನಡೆಸಿ ಕಾರವಾರಕ್ಕೆ ತೆರಳಲು ಯತ್ನಿಸಿದ್ದ ಜಿಲ್ಲಾಧಿಕಾರಿಗಳ ಕಾರನ್ನು ಪ್ರತಿಭಟನಾಕಾರರು ತಡೆದರು. ಸ್ವಲ್ಪ ಸಮಯ ವಾಗ್ವಾದ ನಡೆದು ಬಳಿಕ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿ ಕಾರವಾರಕ್ಕೆ ಮರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net