ದ್ಯಾಮವ್ವ ದೇವಿ ಜಾತ್ರೆ 21ರಿಂದ

17-hvr-05
Published on

ಹಾವೇರಿ: ನಗರದ ಐತಿಹಾಸಿಕ ಪ್ರಸಿದ್ಧ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ 115 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆಚರಿಸಲಾಗುತ್ತಿದ್ದು, ಫೆ. 21ರಿಂದ 28ವರೆಗೆ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಅಶೋಕ ಮುದಗಲ್ಲ ತಿಳಿಸಿದರು.

ನಗರದಲ್ಲಿರುವ ಶ್ರೀ ದ್ಯಾಮವ್ವದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಜಾತ್ರಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಫೆ. 21ರಂದು ಅಂಕಿ ಹಾಕುವುದು ಹಾಗೂ ಪಡ್ಲಗಿ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. 25ರಂದು ನಗರದ ದೇವಸ್ಥಾನಗಳಿಗೆ ನೈವೇದ್ಯ ಮಾಡಿಸುವುದು. ಅದೇದಿನ ಮಧ್ಯಾಹ್ನ 12 ಗಂಟೆಗೆ ವಿವಿಧ ವಾದ್ಯವೈಭೋಗ, ಕಲಾ ತಂಡಗಳೊಂದಿಗೆ ಶ್ರೀ ದೇವಿಯ ಭವ್ಯ ಉತ್ಸವ ಮೆರವಣಿಗೆ ನಡೆಯಲಿದೆ ಎಂದರು.

ಮೆರವಣಿಗೆಯು ನಗರದ ದ್ಯಾಮವ್ವನ ಗುಡಿಯಿಂದ ನಾಯ್ಕರ ಚಾಳ, ಹಳೇ ಅಂಚೆ ಕಚೇರಿ ರಸ್ತೆ, ಕಮಲ ಕಲ್ಯಾಣ ಮಂಟಪ ರಸ್ತೆ, ಜೈನರ ರಸ್ತೆ, ಹಳೆ ಊರಿನ ಓಣಿ, ಶ್ರೀ ರಾಮದೇವರ ಗುಡಿ, ಗಾಂಧಿ ವೃತ್ತ, ಕಲ್ಲುಮಂಟಪ ರಸ್ತೆ, ಬಸ್ತಿಓಣಿ, ತರಕಾರಿ ಮಾರುಕಟ್ಟೆ, ಗೌಳಿಗಲ್ಲಿ, ಯಾಲಕ್ಕಿ ಓಣಿ, ಗುಜ್ಜರ ಗುಡಿ, ಪುರದ ಓಣಿ, ಚೌಡೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಸುಭಾಸ ವೃತ್ತ, ಮೇಲಿನಪೇಟೆ, ಗಾಂಧಿರಸ್ತೆ, ಹಳೇ ಚಾವಡಿ ಮೂಲಕ ಫೆ. 26ರ ಬೆಳಗ್ಗೆ ನಸುಕಿನ 4 ಗಂಟೆಗೆ ಚೌತಮನಿ ಕಟ್ಟೆಯಲ್ಲಿ ಗ್ರಾಮದೇವತೆ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ ಎಂದರು.

ಫೆ. 26ರಂದು ಪ್ರಾಥಃಕಾಲ 5 ಗಂಟೆಗೆ ರಂಗ ಹೊಯ್ಯುವುದು, ಉಡಿ ತುಂಬಿಸುವುದು, ಹಣ್ಣುಕಾಯಿ ನೈವೇದ್ಯ, ಸಾರ್ವಜನಿಕರಿಂದ ವಿವಿಧ ಸೇವೆ, ಹರಕೆ, ಕಾಣಿಕೆ ಸಮರ್ಪಣೆ ನಡೆಯಲಿದೆ. ಫೆ. 27ರಂದು ಶ್ರೀದೇವಿಗೆ ಸೇವೆ ಮುಂದುವರಿಯಲಿದ್ದು, ಸಂಜೆ 5 ಗಂಟೆಗೆ ದೇವಿಯನ್ನು ಗಡಿಗೆ ಕಳುಹಿಸಲಾಗುತ್ತದೆ. ಫೆ. 28ರಂದು ಬೆಳಗ್ಗೆ 10 ಗಂಟೆಗೆ ದ್ಯಾಮವ್ವ ದೇವಿಯನ್ನು ಗುಡಿ ತುಂಬಿಸುವುದು, ದೇವಿಗೆ ಕ್ಷೀರಾಭಿಷೇಕ, ಚಂಡಿಪಾರಾಯಣ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯಲಿವೆ ಎಂದರು.

ದೇವಸ್ಥಾನ ಸಮಿತಿಯ ಗೌರವ ಕಾರ್ಯದರ್ಶಿ ಗಂಗಾಧರ ಹೂಗಾರ ಮಾತನಾಡಿ, ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೆರವಣಿಗೆ ಸಾಗುವ ಮಾರ್ಗದ ರಸ್ತೆ ದುರಸ್ತಿಗೊಳಿಸಲು, ಸ್ವಚ್ಛತೆ ಕಾಪಾಡಲು ನಗರಸಭೆಗೆ ತಿಳಿಸಲಾಗಿದೆ. ಸಾರ್ವಜನಿಕರು ಮೆರವಣಿಗೆ ಮಾರ್ಗದುದ್ದಕ್ಕೂ ತಳಿರು ತೋರಣ ಕಟ್ಟಿ, ರಂಗವಲ್ಲಿ ಹಾಕಿ ಸ್ವಾಗತಿಸುತ್ತಾರೆ. ಜಾತ್ರಾ ದಿನಗಳಲ್ಲಿ ನಗರದಲ್ಲಿ ವಾಹನಗಳು ಒಳಗೆ ಪ್ರವೇಶಿಸಲು ಅವಕಾಶವಿಲ್ಲದೇ ಇರುವುದರಿಂದ ನಗರದ ಹುಕ್ಕೇರಿಮಠದ ಶಾಲಾ ಮೈದಾನ, ಮುರುಘಾಮಠ ಆವರಣ, ಜಿ.ಎಚ್. ಕಾಲೇಜ್ ಬಳಿಯಿರುವ ಖಾಲಿ ಜಮೀನು, ಮುನ್ಸಿಪಲ್ ಮೈದಾನ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲು, ಸೂಕ್ತ ಭದ್ರತೆ ಒದಗಿಸಲು ಪೊಲೀಸರನ್ನು ಕೇಳಿಕೊಳ್ಳಲಾಗಿದೆ ಎಂದರು.

ದೇವಸ್ಥಾನ ಸಮಿತಿಯ ಪ್ರಮುಖರಾದ ದೊಡ್ಡದ್ಯಾಮಣ್ಣ ಬಡಿಗೇರ, ಹನುಮಂತನಾಯ್ಕ ಬದಾಮಿ, ಕಿರಣ ಕೊಳ್ಳಿ, ಸಣ್ಣದ್ಯಾಮಣ್ಣನವರ, ಪೃಥಿರಾಜ ಬೆಟಗೇರಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಶತಮಾನದ ಬಳಿಕ ಇದೇ ಮೊದಲ ಬಾರಿಗೆ ಜಾತ್ರೆ ಮಾಡಲಾಗುತ್ತಿದ್ದು ಎಲ್ಲ ಸಾರ್ವಜನಿಕರ ಸಹಕಾರ ಅವಶ್ಯ. ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರು ತನುಮನ ಧನದಿಂದ ಸಹಕಾರ ನೀಡಿ ದೇವಿಯ ಕೃಪೆಗೆ ಪಾತ್ರರಾಗಬೇಕು.| ಬಸವರಾಜ ಹೂಗಾರ, ದೇವಸ್ಥಾನ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net