

ಪೆರ್ಲ: ಪರಂಪರಾಗತ ಭತ್ತ ಗದ್ದೆಗಳನ್ನು, ಆಚಾರ ವಿಚಾರಗಳನ್ನು ಯುವ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಸ್ವರ್ಗ ಎಂ.ಕೆ.ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದ ಆಶ್ರಯದಲ್ಲಿ ‘ಕೆಸರು ಗದ್ದೆಯಲ್ಲಿ ಒಂದು ದಿನ’ ಕಾರ್ಯಕ್ರಮ ಆಯೋಜಿಸಲಾಯಿತು.
ಬಜಕುಡೆ ದಿ.ಕೊರಗಪ್ಪ ನಾಯ್ಕ ಬಯಲು ಗದ್ದೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಕೆ. ಉದ್ಘಾಟಿಸಿದರು. ಎಂ.ಕೆ. ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದ ಅಧ್ಯಕ್ಷ ರವಿರಾಜ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ ಎಂ., ನಿವೃತ್ತ ಶಿಕ್ಷಕ ಬಟ್ಯ, ಸಿ.ಡಿ.ಎಸ್ ಉಪಾಧ್ಯಕ್ಷೆ ಶಶಿಕಲಾ ಕೆ. ಶುಭಾಶಂಸನೆಗೈದರು.
ವರ್ಗಾವಣೆಗೊಂಡು ತೆರಳುತ್ತಿರುವ ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಹರೀಶ್ ಎಂ.ಎಸ್. ಅವರನ್ನು ಸನ್ಮಾನಿಸಲಾಯಿತು. ಗ್ರಂಥಾಲಯ ಕಾರ್ಯದರ್ಶಿ ರವಿ ವಾಣಿನಗರ ಸ್ವಾಗತಿಸಿದರು. ಗ್ರಂಥಾಲಯ ಸಮಿತಿ ಉಪಾಧ್ಯಕ್ಷೆ ಚಂದ್ರಾವತಿ ನಿರೂಪಿಸಿದರು. ರಾಜೇಶ್ ಬೈರಡ್ಕ ವಂದಿಸಿದರು.
ವಿವಿಧ ಸ್ಪರ್ಧೆಗಳು
ವಿವಿಧ ಸ್ಪರ್ಧೆಗಳು ಜರುಗಿದವು. ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಬಿ.ನರಸಿಂಹ ಪೂಜಾರಿ ಬಹುಮಾನ ವಿತರಿಸಿದರು. ರವಿರಾಜ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಉಪ ತಹಸಿಲ್ದಾರ್ ಅಬ್ದುಲ್ ಹಮೀದ್ ಪಾಲ್ಗೊಂಡರು.