

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಮಾಯಕೊಂಡ, ಆನಗೋಡು ಹಾಗೂ ಅಣಜಿ ಹೋಬಳಿಗಳ ನೂರಾರು ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಮೆಕ್ಕೆಜೋಳ ಮತ್ತು ರಾಗಿ ಕಟಾವು ಪೂರ್ಣಗೊಂಡ ಜಮೀನುಗಳಲ್ಲಿ ಹಿಂಗಾರು ಹಂಗಾಮಿನ ಮಾಗಿ ಉಳುಮೆ ಕಾರ್ಯ ಬಿರುಸಿನಿಂದ ಸಾಗಿದೆ.
ದಾವಣಗೆರೆ ತಾಲೂಕಿನಾದ್ಯಂತ ಬಹುತೇಕ ಮಳೆಯಾಶ್ರಿತ ಜಮೀನುಗಳಲ್ಲಿ ಈ ಬಾರಿ ತೀವ್ರ ಬರಗಾಲದಿಂದಾಗಿ ಬೆಳೆಗಳು ಹಾನಿಗೊಳಗಾಗಿದ್ದವು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ, ರಾಗಿ, ತೊಗರಿ, ಜೋಳ ಹಾಗೂ ಎಣ್ಣೆಕಾಳು ಬೆಳೆಗಳು ಸೇರಿ ಒಟ್ಟು ಸರಾಸರಿ 31,917 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿತ್ತು.
ಪ್ರಸ್ತುತ ರಾಗಿ ಮತ್ತು ಮೆಕ್ಕೆಜೋಳ ಕಟಾವು ಕಾರ್ಯ ನಡೆಯುತ್ತಿದ್ದು, ತೊಗರಿ ಹಾಗೂ ಅವರೆಯಂತಹ ದ್ವಿದಳ ಧಾನ್ಯಗಳು ಕಾಯಿ ಕಟ್ಟುವ ಹಂತದಲ್ಲಿವೆ. ಅಳಿದುಳಿದ ಬೆಳೆಯನ್ನು ಕಟಾವು ಮಾಡಿದ ನಂತರ, ರೈತರು ಟ್ರ್ಯಾಕ್ಟರ್ಗಳ ಮೂಲಕ ಫ್ಲೋ ಮತ್ತು ಬಾಂಡ್ಲಿ ಬಳಸಿ ಮಾಗಿ ಉಳುಮೆ ಮಾಡುತ್ತಿದ್ದಾರೆ. ಕಳೆದ ವಾರ ಸುರಿದ ಅಲ್ಪಸ್ವಲ್ಪ ಮಳೆಯು ಮಾಗಿ ಉಳುಮೆಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ.
1. ಉಳುಮೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೆ, ಉಪಯುಕ್ತ ಜೀವಕೋಶಗಳ ಸಂಖ್ಯೆ ವೃದ್ಧಿಯಾಗುತ್ತದೆ. 2. ಭೂಮಿಯ ಆಳದಿಂದ ಮಣ್ಣನ್ನು ಮಗುಚಿ ಹಾಕುವುದರಿಂದ ಅನಾವಶ್ಯಕ ಕ್ರಿಮಿ-ಕೀಟಗಳು ನಾಶವಾಗುತ್ತವೆ. 3. ಮೆಕ್ಕೆಜೋಳ ಕಟಾವಿನ ನಂತರ ಜಮೀನಿನಲ್ಲಿ ಉಳಿಯುವ ಕಸ, ಕಡ್ಡಿ ಹಾಗೂ ಹುಲ್ಲು ಮಣ್ಣಿನಲ್ಲಿ ಬೆರೆತು ನೈಸರ್ಗಿಕ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. 4. ಮುಂದಿನ ಮುಂಗಾರು ಬಿತ್ತನೆಯ ಸಮಯಕ್ಕೆ ಮಣ್ಣು ಹದಗೊಂಡು ಬೆಳೆಗಳಿಗೆ ಉತ್ತಮ ಪೋಷಕಾಂಶ ದೊರೆಯುವುದರಿಂದ ಇಳುವರಿಯೂ ಹೆಚ್ಚುತ್ತದೆ.