ನಾನು ಭಕ್ತರ ಋಣದಲ್ಲಿದ್ದೇನೆಯೇ ಹೊರತು ಬೇರೆಯವರದ್ದಲ್ಲ: ಪದಚ್ಯುತಿ ಬೆನ್ನಲ್ಲೇ ವಚನಾನಂದ ಶ್ರೀ ತಿರುಗೇಟು! Sri Vachanananda Swamiji

ನಾನು ಭಕ್ತರ ಋಣದಲ್ಲಿದ್ದೇನೆಯೇ ಹೊರತು ಬೇರೆಯವರದ್ದಲ್ಲ: ಪದಚ್ಯುತಿ ಬೆನ್ನಲ್ಲೇ ವಚನಾನಂದ ಶ್ರೀ ತಿರುಗೇಟು! Sri Vachanananda Swamiji
ನಾನು ಭಕ್ತರ ಋಣದಲ್ಲಿದ್ದೇನೆಯೇ ಹೊರತು ಬೇರೆಯವರದ್ದಲ್ಲ: ಪದಚ್ಯುತಿ ಬೆನ್ನಲ್ಲೇ ವಚನಾನಂದ ಶ್ರೀ ತಿರುಗೇಟು! Sri Vachanananda Swamiji
Published on

ಪ್ರಮುಖ ಮುಖ್ಯಾಂಶಗಳು

  • ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ
  • ಮಠದ ಅನುದಾನ ದುರ್ಬಳಕೆ ಆರೋಪ ಕೇಳಿಬಂದ ಬೆನ್ನಲ್ಲೇ ಪೀಠದಿಂದ ಶ್ರೀ ವಚನಾನಂದ ಸ್ವಾಮೀಜಿ ಪದಚ್ಯುತಿ
  • ಇಂದು ನಡೆದ ಟ್ರಸ್ಟ್‌ನ ಸಭೆಯಲ್ಲಿ 28 ಜನ ಟ್ರಸ್ಟಿಗಳ ಸಮ್ಮತಿಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
  • ಬೇಕಂತಲೇ ಪಂಚಮಸಾಲಿ ಸ್ವಾಮೀಜಿಗಳನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಗುಡುಗಿದ ವಚನಾನಂದ ಸ್ವಾಮೀಜಿ
ದಾವಣಗೆರೆ: ತಮ್ಮನ್ನು ಹರಿಹರ ಪಂಚಮಸಾಲಿ ಪೀಠದಿಂದ ಪದಚ್ಯುತಿಗೊಳಿಸಿದ ಬೆನ್ನಲ್ಲೇ ಟ್ರಸ್ಟಿಗಳ ವಿರುದ್ಧ ಗುಡುಗಿದ ಶ್ರೀ ವಚನಾನಂದ ಸ್ವಾಮೀಜಿ ( Sri Vachanand Swamiji ), ಕರ್ನಾಟಕದಲ್ಲಿ ಪಂಚಮಸಾಲಿ ಸಮಾಜ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ. ಅದರಲ್ಲೂ ಪಂಚಮಸಾಲಿ ನಾಯಕರು ತುಂಬಾ ಪ್ರಭಾವಿಗಳಾಗುತ್ತಿದ್ದಾರೆ. ಹೀಗಾಗಿ, ಬೇಕಂತಲೇ ನಮ್ಮ ಪಂಚಮಸಾಲಿ ನಾಯಕರೊಂದಿಗೆ ನಮ್ಮ ಸಮಾಜದ ಸ್ವಾಮೀಜಿಗಳನ್ನೂ ಟಾರ್ಗೆಟ್​ ಮಾಡುತ್ತಿದ್ದಾರೆ ಎಂದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ವಚನಾನಂದ ಸ್ವಾಮೀಜಿ, ನಾವು 2018ರಲ್ಲಿ ಪಂಚಮಸಾಲಿ ಪೀಠಕ್ಕೆ ಬಂದ ಮೇಲೆ ನಮ್ಮ ಕನಸು ಏನಿತ್ತು ಅಂದರೆ, ಹರಿಹರ ತಾಲೂಕು, ದಾವಣಗೆರೆಯ ಪ್ರತಿ ಮನೆಮನೆಗೂ ಹೋಗಬೇಕೆಂದು ಬಯಸಿದ್ದೆವು. ಆದರೆ, ನಾವು ಪೀಠಕ್ಕೆ ಬಂದಾಗಿನಿಂದ ನಮ್ಮನ್ನು ವ್ಯವಸ್ಥಿತವಾಗಿ ಹರಿಹರ ತಾಲೂಕು ಸೇರಿದಂತೆ ಇಡೀ ದಾವಣಗೆರೆ ಜಿಲ್ಲೆಯ ಯಾವುದೇ ಭಕ್ತರ ಮನೆಗೆ ಹೋಗದಂತೆ ತಡೆದರು. ಆದರೆ, ನಾವು ಇತ್ತೀಚಿನ ದಿನಗಳಲ್ಲಿ ಭಕ್ತರ ಮನೆಗಳಿಗೆ ಹೋಗುತ್ತಿದ್ದೇವೆ. ನಾವು ಪ್ರವಾಸಕ್ಕೆ ಹೋದಾಗಲೆಲ್ಲ ಯಾರೇ ಬಡವರು ಕಂಡರೂ ಅಲ್ಲೇ ದುಡ್ಡು ಕೊಟ್ಟು ಬರುತ್ತೇವೆ ಎಂದು ಹೇಳಿದರು.
ನಾನು ಹೇಳುವುದೇನೆಂದರೆ, ಭಕ್ತನೇ ಈ ಭೂಮಿಯ ಮೇಲಿನ ಭಗವಂತ ಮತ್ತು ಪಂಚಮಸಾಲಿ ಸಮಾಜವೇ ನನ್ನ ಶ್ವಾಸ. ಇಂದಿಗೂ ನಾನು ಒಂದೇ ಒಂದು ರೂಪಾಯಿಗಾಗಿ ಯಾರ ಬಳಿಯೂ ಕೈ ಒಡ್ಡಿಲ್ಲ. ನಮ್ಮದೇನಿದ್ದರೂ ಕೊಡುವಂತಹ ಕೈ. ಆದರೆ, ನನಗೆ ಭಕ್ತರು ಪ್ರಸಾದವನ್ನು ಕೊಟ್ಟಿದ್ದಾರೆ. ರೊಟ್ಟಿ ಮಾಡಿ ಕೊಟ್ಟಿದ್ದಾರೆ ಮತ್ತು ಅನ್ನ ಮಾಡಿ ಕೊಟ್ಟಿದ್ದಾರೆ. ಅವರ ಋಣದಲ್ಲಿ ನಾನಿದ್ದೇನೆ ಹೊರತು ಉಳಿದ ಯಾರೊಬ್ಬರ ಋಣದಲ್ಲೂ ನಾನಿಲ್ಲ. ಹೀಗಾಗಿ ಭಕ್ತರು ಏನು ಹೇಳುತ್ತಾರೋ ಅದೇ ಅಂತಿಮವೇ ಹೊರತು ನಾಲ್ಕು ಮಂದಿ ಹೇಳುವುದು ಫೈನಲ್​ ಅಲ್ಲ ಎನ್ನುವ ಮೂಲಕ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿಗಳಿಗೆ ತಿರುಗೇಟು ನೀಡಿದರು.
ಪದಚ್ಯುತಿ ವಿಚಾರವಾಗಿ ನಮ್ಮ ಭಕ್ತರ ಜೊತೆ ಚರ್ಚೆ ಮಾಡುತ್ತೇವೆ. ನಮ್ಮ ಸಮಾಜದ ಎಲ್ಲಾ ಮುಖಂಡರು ಬಂದು ಕೂತು ಚರ್ಚೆ ಮಾಡುತ್ತಾರೆ. ನನ್ನ ಬಗ್ಗೆ ಅವರು ನಿರ್ಧಾರ ತೆಗೆದುಕೊಳ್ಳಬೇಕಿದೆ. ಇಲ್ಲಿ ಸ್ವಾಮೀಜಿಗಳಿಗೆ ಯಾವುದೇ ಅಧಿಕಾರ ಇಲ್ಲ. ಒಂದು ವೇಳೆ ಅಧಿಕಾರ ಇದ್ದಿದ್ದರೆ, ನಾವು ಕಂಡೀಷನ್​ ಹಾಕಿಕೊಂಡು ಬರುತ್ತಿದ್ದೇವು. ಆದರೆ, ನಾವು ಅಧಿಕಾರಕ್ಕಾಗಿ ಬಂದಿಲ್ಲ, ನಮ್ಮದೇನಿದ್ದರೂ ನಮ್ಮ ಸಮಾಜದ ಸಂಘಟನೆ ಆಗಬೇಕು ಮತ್ತು ಈ ಸಮಾಜವನ್ನು ದೊಡ್ಡದಾಗಿ ಬೆಳೆಸಬೇಕು. ಬಡವರಿಗೆ ಅನುಕೂಲವಾಗಬೇಕೆಂದು ನಾವು ಎಲ್ಲವನ್ನು ತ್ಯಾಗ ಮಾಡಿ ಬಂದಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.
ಕರ್ನಾಟಕದಲ್ಲಿ ಪಂಚಮಸಾಲಿ ಸಮಾಜ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ. ಅದರಲ್ಲೂ ಪಂಚಮಸಾಲಿ ನಾಯಕರು ತುಂಬಾ ಪ್ರಭಾವಿಗಳಾಗುತ್ತಿದ್ದಾರೆ. ಲಿಂಗಾಯತರಲ್ಲೇ ಪಂಚಮಸಾಲಿ ನಾಯಕರ ಪ್ರಭಾವ ಹೆಚ್ಚಾಗುತ್ತಿದೆ. ಹೀಗಾಗಿ ಬೇಕಂತಲೇ ನಮ್ಮ ಪಂಚಮಸಾಲಿ ನಾಯಕರೊಂದಿಗೆ ಪಂಚಮಸಾಲಿ ಸ್ವಾಮೀಜಿಗಳನ್ನೂ ಟಾರ್ಗೆಟ್​ ಮಾಡುತ್ತಿದ್ದಾರೆ. ಈ ಮೂಲಕ ಸಮಾಜವನ್ನೇ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಇನ್ನು ತಮ್ಮ ಪದಚ್ಯುತಿ ವಿಚಾರವಾಗಿ ಕಾನೂನು ಹೋರಾಟ ಮಾಡುವುದನ್ನು ಭಕ್ತರ ಜತೆ ಚರ್ಚಿಸುತ್ತೇನೆಂದರು.

ಇಂದು ಏನಾಯಿತು?

ಇಂದು (ಏಪ್ರಿಲ್​ 13) ನಡೆದ ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ಸಭೆಯಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಲಾಯಿತು. ಸಭೆಯ ನಂತರ ಟ್ರಸ್ಟಿ ಬಸವರಾಜ ದಿಂಡೂರು ಅವರು ಅಧಿಕೃತ ಘೋಷಣೆ ಮಾಡಿದರು. ಕಳೆದ ಎರಡು ತಿಂಗಳಿಂದ ಈ ಗೊಂದಲವಿತ್ತು. ಶ್ವಾಸಪೀಠ ಅಥವಾ ಹರಿಹರ ಪೀಠ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ವಚನಾನಂದ ಶ್ರೀಗಳಿಗೆ ಟ್ರಸ್ಟ್ ಹೇಳಿತ್ತು. ಅದಕ್ಕಾಗಿ ಗಡುವನ್ನೂ ನೀಡಿತ್ತು. ಆದರೆ ಸ್ವಾಮೀಜಿ ಸ್ಪಷ್ಟ ನಿಲುವು ತಿಳಿಸಿರಲಿಲ್ಲ. ಹೀಗಾಗಿ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಲಾಗಿದೆ ಎಂದು ಬಸವರಾಜ ಡಿಂಡೂರು ಮಾಧ್ಯಮಗಳಿಗೆ ತಿಳಿಸಿದರು. 

ವಿವಾದದ ಹಿನ್ನೆಲೆ ಏನು?

ಮಠಕ್ಕೆ ಸರ್ಕಾರ ನೀಡಿದ ಅನುದಾನ ಮತ್ತು ಭಕ್ತರು ನೀಡಿದ ದೇಣಿಗೆಯು ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಪಾರದರ್ಶಕತೆ ಕೋರಿ ಪಂಚಮಸಾಲಿ ಸಮಾಜದ ಒಂದು ಬಣ ಇಂದು ಹೋರಾಟಕ್ಕೆ ಇಳಿದಿದೆ. ಮಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು ಇಂದು ಟ್ರಸ್ಟಿಗಳ ಮಹತ್ವದ ಸಭೆ ಕರೆದಿದ್ದರು. ಈ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸುತ್ತಿದ್ದ ಎಂಎಲ್‌ಸಿ ಸೋಮಣ್ಣ ಬೇವಿನಮರದ ಸೇರಿದಂತೆ 50ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಕಾರ್ಯಾಚರಣೆ ಮತ್ತು ಬಂಧನ

ಟ್ರಸ್ಟಿಗಳ ಸಭೆಗೂ ಮುನ್ನವೇ ಪಂಚಮಸಾಲಿ ಮುಖಂಡ ಪರಮೇಶ್ವರಗೌಡ ನೇತೃತ್ವದಲ್ಲಿ ಸಮಾಜದ ಮುಖಂಡರು ಸಭೆ ನಡೆಸಲು ಮುಂದಾಗಿದ್ದರು. ಆದರೆ, ಟ್ರಸ್ಟ್ ಮನವಿಯ ಮೇರೆಗೆ ಅಹಿತಕರ ಘಟನೆ ತಡೆಯಲು ಮಠದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನಿಷೇಧಾಜ್ಞೆ ನಡುವೆಯೂ ಮಠದ ಎದುರು ಜಮಾಯಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ತಳ್ಳಾಟ-ನೂಕಾಟ ಉಂಟಾಗಿ, ಹಿರಿಯ ಮುಖಂಡ ಪರಮೇಶ್ವರಗೌಡ ಅಸ್ವಸ್ಥರಾದರು.
ಎಂಎಲ್‌ಸಿ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಬಿಜೆಪಿ ಮುಖಂಡ ಅಜಯಕುಮಾರ್, ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ್, ನಂದಿಹಳ್ಳಿ ಹಾಲಪ್ಪ ಹಾಗೂ ಅರುಣಕುಮಾರ್ ಪೂಜಾರ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಬಿಗಿ ಭದ್ರತೆಯಲ್ಲಿ ಟ್ರಸ್ಟಿಗಳ ಸಭೆ

ಒಂದೆಡೆ ಬಂಧನ ಪ್ರಕ್ರಿಯೆ ನಡೆಯುತ್ತಿದ್ದರೆ, ಮತ್ತೊಂದೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮಠದ ಟ್ರಸ್ಟಿಗಳು ಸಭೆಗೆ ಆಗಮಿಸಿದರು. ಸುಮಾರು 28 ಜನ ಟ್ರಸ್ಟಿಗಳು ಬಸ್‌ನಲ್ಲಿ ಒಟ್ಟಾಗಿ ಮಠಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಸ್ವಾಮೀಜಿಯವರನ್ನು ಪದಚ್ಯುತಿಗೊಳಿಸಲಾಯಿತು.
ಪ್ರಸ್ತುತ ಹರಿಹರ ಪಂಚಮಸಾಲಿ ಪೀಠದ ಸುತ್ತಮುತ್ತ ಬಿಗಿ ಪೊಲೀಸ್ ಕಾವಲು ಮುಂದುವರಿದಿದ್ದು, ಭಕ್ತರಲ್ಲಿ ಮತ್ತು ಸಮಾಜದ ಮುಖಂಡರಲ್ಲಿ ಭಾರೀ ಕುತೂಹಲ ಹಾಗೂ ಆಕ್ರೋಶ ಮನೆಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net