ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ
ಮಠದ ಅನುದಾನ ದುರ್ಬಳಕೆ ಆರೋಪ ಕೇಳಿಬಂದ ಬೆನ್ನಲ್ಲೇ ಪೀಠದಿಂದ ಶ್ರೀ ವಚನಾನಂದ ಸ್ವಾಮೀಜಿ ಪದಚ್ಯುತಿ
ಇಂದು ನಡೆದ ಟ್ರಸ್ಟ್‌ನ ಸಭೆಯಲ್ಲಿ 28 ಜನ ಟ್ರಸ್ಟಿಗಳ ಸಮ್ಮತಿಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
ಇಂದು ಪ್ರತಿಭಟನೆ ನಡೆಸುತ್ತಿದ್ದ ಎಂಎಲ್‌ಸಿ ಸೋಮಣ್ಣ ಬೇವಿನಮರದ ಸೇರಿ 50ಕ್ಕೂ ಹೆಚ್ಚು ಮುಖಂಡರು ಪೊಲೀಸರ ವಶಕ್ಕೆ
ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಪ್ರಸಿದ್ಧ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ( Harihara Panchamasali Peetha ) ಈಗ ವಿವಾದದ ಕೇಂದ್ರಬಿಂದುವಾಗಿದೆ. ಮಠದ ಅನುದಾನ ದುರ್ಬಳಕೆ ಆರೋಪ ಕೇಳಿಬಂದ ಬೆನ್ನಲ್ಲೇ ಪೀಠದಿಂದ ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಲಾಗಿದೆ.
ಪಂಚಮಸಾಲಿ ಪೀಠದಲ್ಲಿ ಸೋಮವಾರ (ಏಪ್ರಿಲ್ 13) ನಡೆದ ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಸಭೆಯ ನಂತರ ಟ್ರಸ್ಟಿ ಬಸವರಾಜ ದಿಂಡೂರು ಅವರು ಅಧಿಕೃತ ಘೋಷಣೆ ಮಾಡಿದರು.
ಕಳೆದ ಎರಡು ತಿಂಗಳಿಂದ ಈ ಬಗ್ಗೆ ಗೊಂದಲವಿತ್ತು. ಶ್ವಾಸಪೀಠ ಅಥವಾ ಹರಿಹರ ಪೀಠ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ವಚನಾನಂದ ಶ್ರೀಗಳಿಗೆ ಟ್ರಸ್ಟ್ ಹೇಳಿತ್ತು. ಅದಕ್ಕಾಗಿ ಗಡುವನ್ನೂ ನೀಡಿತ್ತು. ಆದರೆ, ಸ್ವಾಮೀಜಿ ಅವರು ತಮ್ಮ ಸ್ಪಷ್ಟ ನಿಲುವು ತಿಳಿಸಿರಲಿಲ್ಲ. ಹೀಗಾಗಿ ಅವರನ್ನು ಪದಚ್ಯುತಿಗೊಳಿಸಲಾಗಿದೆ ಎಂದು ಬಸವರಾಜ ಡಿಂಡೂರು ಮಾಧ್ಯಮಗಳಿಗೆ ತಿಳಿಸಿದರು.
ವಿವಾದದ ಹಿನ್ನೆಲೆ ಏನು?
ಮಠಕ್ಕೆ ಸರ್ಕಾರ ನೀಡಿದ ಅನುದಾನ ಮತ್ತು ಭಕ್ತರು ನೀಡಿದ ದೇಣಿಗೆಯು ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಪಾರದರ್ಶಕತೆ ಕೋರಿ ಪಂಚಮಸಾಲಿ ಸಮಾಜದ ಒಂದು ಬಣ ಇಂದು ಹೋರಾಟಕ್ಕೆ ಇಳಿದಿದೆ. ಮಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು ಇಂದು ಟ್ರಸ್ಟಿಗಳ ಮಹತ್ವದ ಸಭೆ ಕರೆದಿದ್ದರು. ಈ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸುತ್ತಿದ್ದ ಎಂಎಲ್‌ಸಿ ಸೋಮಣ್ಣ ಬೇವಿನಮರದ ಸೇರಿದಂತೆ 50ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟ್ರಸ್ಟಿಗಳ ಸಭೆಗೂ ಮುನ್ನವೇ ಪಂಚಮಸಾಲಿ ಮುಖಂಡ ಪರಮೇಶ್ವರಗೌಡ ನೇತೃತ್ವದಲ್ಲಿ ಸಮಾಜದ ಮುಖಂಡರು ಸಭೆ ನಡೆಸಲು ಮುಂದಾಗಿದ್ದರು. ಆದರೆ, ಟ್ರಸ್ಟ್ ಮನವಿಯ ಮೇರೆಗೆ ಅಹಿತಕರ ಘಟನೆ ತಡೆಯಲು ಮಠದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನಿಷೇಧಾಜ್ಞೆ ನಡುವೆಯೂ ಮಠದ ಎದುರು ಜಮಾಯಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ತಳ್ಳಾಟ-ನೂಕಾಟ ಉಂಟಾಗಿ, ಹಿರಿಯ ಮುಖಂಡ ಪರಮೇಶ್ವರಗೌಡ ಅಸ್ವಸ್ಥರಾದರು.
ಎಂಎಲ್‌ಸಿ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಬಿಜೆಪಿ ಮುಖಂಡ ಅಜಯಕುಮಾರ್, ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ್, ನಂದಿಹಳ್ಳಿ ಹಾಲಪ್ಪ ಹಾಗೂ ಅರುಣಕುಮಾರ್ ಪೂಜಾರ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಬಿಗಿ ಭದ್ರತೆಯಲ್ಲಿ ಟ್ರಸ್ಟಿಗಳ ಸಭೆ
ಒಂದೆಡೆ ಬಂಧನ ಪ್ರಕ್ರಿಯೆ ನಡೆಯುತ್ತಿದ್ದರೆ, ಮತ್ತೊಂದೆಡೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮಠದ ಟ್ರಸ್ಟಿಗಳು ಸಭೆಗೆ ಆಗಮಿಸಿದರು. ಸುಮಾರು 28 ಜನ ಟ್ರಸ್ಟಿಗಳು ಬಸ್‌ನಲ್ಲಿ ಒಟ್ಟಾಗಿ ಮಠಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಸ್ವಾಮೀಜಿಯವರನ್ನು ಪದಚ್ಯುತಿಗೊಳಿಸಲಾಯಿತು.
ಪ್ರಸ್ತುತ ಹರಿಹರ ಪಂಚಮಸಾಲಿ ಪೀಠದ ಸುತ್ತಮುತ್ತ ಬಿಗಿ ಪೊಲೀಸ್ ಕಾವಲು ಮುಂದುವರಿದಿದ್ದು, ಭಕ್ತರಲ್ಲಿ ಮತ್ತು ಸಮಾಜದ ಮುಖಂಡರಲ್ಲಿ ಭಾರೀ ಕುತೂಹಲ ಹಾಗೂ ಆಕ್ರೋಶ ಮನೆಮಾಡಿದೆ.