Pension ಹೊನ್ನಾಳಿಯಲ್ಲಿ ನಡೆದ ಬಿಜೆಪಿ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ಅರಕೆರೆ ನಾಗರಾಜ್, ಜೆ.ಕೆ. ಸುರೇಶ್, ಕೆ.ಪಿ. ಕುಬೇರಪ್ಪ ಚಿತ್ರದಲ್ಲಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ
ಜೂನ್ 30 ರಂದು ತಾಲೂಕು ಕಚೇರಿಗೆ ಮುತ್ತಿಗೆ
ಹೊನ್ನಾಳಿಯಲ್ಲಿ ಬಿಜೆಪಿ ಪೂರ್ವಭಾವಿ ಸಭೆ
ಹೊನ್ನಾಳಿ: ರಾಜ್ಯ ಸರ್ಕಾರ ಬಡವರ ಮಾಸಾಶನ ತಡೆ ಹಿಡಿದಿದೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ ಮತ್ತು ಅಂಗವಿಕಲರ ವೇತನ ಕಳೆದ ಮೂರು ತಿಂಗಳಿಂದ ಬಂದಿಲ್ಲ. ಈ ಬಗ್ಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. Pension
ಹೊನ್ನಾಳಿಯಲ್ಲಿ ನಡೆದ ಬಿಜೆಪಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಬಡವರು ಮಾಸಾಶನ ಬಾರದೆ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ಔಷಧಿ ಹಾಗೂ ದಿನಸಿ ಖರ್ಚಿಗೆ ಹಣವಿಲ್ಲದೆ ವೃದ್ಧರು ಕಂಗಾಲಾಗಿದ್ದಾರೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮಾಸಾಶನವನ್ನು ೧,೨೦೦ ರೂ. ಗೆ ಹೆಚ್ಚಿಸಿದ್ದರು. ಆದರೆ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಬಡವರಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಖಜಾನೆ ಸಂಪೂರ್ಣ ದಿವಾಳಿಯಾಗಿದೆ ಎಂದು ಅವರು ದೂರಿದರು.
ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಪ್ರಶ್ನಿಸಿದ ಅವರು, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳಿಗೆ ಈಗ ಹೊಸದಾಗಿ ನೋಂದಾಯಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈ ಮುಂಚೆ ಅರ್ಹರಲ್ಲದವರಿಗೂ ಏಕೆ ಯೋಜನೆ ಸೌಲಭ್ಯ ಕಲ್ಪಿಸಿದ್ದೀರಿ ಎಂದು ಕೇಳಿದರು. ಸರ್ಕಾರ ಸಬೂಬು ಹೇಳುವುದನ್ನು ಬಿಟ್ಟು ತಕ್ಷಣ ಎಲ್ಲ ಅರ್ಹರಿಗೂ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಖಾಸಗೀಕರಣಕ್ಕೆ ವಿರೋಧ
ಸರ್ಕಾರ ವಿದ್ಯುತ್ ಪ್ರಸರಣ ನಿಗಮಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಖಾಸಗೀಕರಣವಾದರೆ ವಿದ್ಯುತ್ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಬಡವರ ಉಚಿತ ಸೌಲಭ್ಯಗಳು ಸ್ಥಗಿತಗೊಳ್ಳಲಿವೆ. ವಿದ್ಯುತ್ ಇಲಾಖೆ ಸಂಪೂರ್ಣ ಸರ್ಕಾರದ ಸ್ವಾಮ್ಯದಲ್ಲೇ ಇರಬೇಕು. ಇಲ್ಲದಿದ್ದರೆ ರೈತರು ಹಾಗೂ ಇಲಾಖೆ ಸಿಬ್ಬಂದಿಯನ್ನು ಒಗ್ಗೂಡಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಸುರೇಶ್ ಜೆ.ಕೆ., ಕೆ.ಪಿ. ಕುಬೇರಪ್ಪ, ಮಾರುತಿನಾಯ್ಕ್, ನೆಲಹೊನ್ನೆ ಮಂಜುನಾಥ್, ಅನಿಲ್ ಕುಂದೂರು, ಎಂ.ಎಸ್. ಪಾಲಾಕ್ಷಪ್ಪ ಉಪಸ್ಥಿತರಿದ್ದರು.
ಜೂನ್ 30 ರಂದು ತಾಲೂಕು ಕಚೇರಿಗೆ ಮುತ್ತಿಗೆ
ಬಾಕಿ ಇರುವ ಮಾಸಾಶನ ಬಿಡುಗಡೆ ಮಾಡಬೇಕು. ಅರ್ಹರಿಗೆ ಪಡಿತರ ವಿತರಿಸಬೇಕು. ಹೊಸ ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಆಹ್ವಾನಿಸಬೇಕು. ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂನ್ ೩೦ ರಂದು ಪಟ್ಟಣದ ಟಿ.ಬಿಯಿಂ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು. ತಾಲೂಕಿನ ರೈತರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರೇಣುಕಾಚಾರ್ಯ ಮನವಿ ಮಾಡಿದರು.