

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಮಾಯಕೊಂಡ ಗ್ರಾಮವು ಹಲವು ಸರ್ಕಾರಿ ಶಾಲಾ- ಕಾಲೇಜುಗಳನ್ನು ಒಳಗೊಂಡಿರುವ ಪ್ರಮುಖ ಶೈಕ್ಷಣಿಕ ಕೇಂದ್ರ. ಇಲ್ಲಿ ಮೆಟ್ರಿಕ್ ನಂತರದ ಹೆಣ್ಣುಮಕ್ಕಳ ವಸತಿ ನಿಲಯ ಇಲ್ಲದ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ಇದೆ.
ಗ್ರಾಮದಲ್ಲಿ ಶ್ರೀ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ತಾಂತ್ರಿಕ ತರಬೇತಿ ಸಂಸ್ಥೆ ಮತ್ತು ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ (ಪ್ರಾಥಮಿಕ - ಪೂರ್ವ ಪ್ರಾಥಮಿಕದಿಂದ ಪಿಯುಸಿವರೆಗೆ) ಕಾರ್ಯಾ ಚರಿಸುತ್ತಿವೆ. ಜಿಲ್ಲಾ ಕೇಂದ್ರವನ್ನು ಹೊರತುಪಡಿಸಿದರೆ ಮಾಯಕೊಂಡದಲ್ಲೇ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ನೀಡುವ ಸರ್ಕಾರಿ ಸಂಸ್ಥೆಗಳಿವೆ. ಇಲ್ಲಿ ಮೂಲಸೌಕರ್ಯ, ಸುಸಜ್ಜಿತ ಕಟ್ಟಡಗಳು, ಪ್ರಯೋಗಾಲಯಗಳು ಹಾಗೂ ನುರಿತ ಅನುಭವಿ ಉಪನ್ಯಾಸ ಕರಿದ್ದು, ಪ್ರತಿವರ್ಷ ಉತ್ತಮ ಫಲಿತಾಂಶ ದಾಖಲಾಗುತ್ತಿದೆ. ಕೆಪಿಎಸ್ ಶಾಲೆಯೊಂದರಲ್ಲೇ 1300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ರೈತರು, ಕೂಲಿ ಕಾರ್ಮಿ ಕರು ಹಾಗೂ ಬಡ ಕುಟುಂಬಗಳ ಮಕ್ಕಳ ಸಂಖ್ಯೆಯೇ ಅಧಿಕ.
ಮಾಯಕೊಂಡ ಕಾಲೇಜುಗಳಿಗೆ ಸುತ್ತಮುತ್ತಲ ಬಾಡ, ನಲ್ಕುಂದ, ಹಿಂಡಸಕಟ್ಟೆ, ಕಂದಗಲ್ಲು, ಕ್ಯಾತನಹಳ್ಳಿ, ಅತ್ತಿಗೆರೆ, ಈಚಘಟ್ಟ, ಕೊಡಗನೂರು, ಕಬ್ಬೂರು, ಮಲ್ಲೇನಹಳ್ಳಿ, ಕಳವೂರು, ಜಂಪೇನಹಳ್ಳಿ, ನಂದಿಗೇನಹಳ್ಳಿ, ರಾಮಗೊಂಡನ ಹಳ್ಳಿ, ಮಳಲ್ಕೆರೆ, ಲೋಕಿಕೆರೆ, ನರಗನಹಳ್ಳಿ, ಬಾವಿಹಾಳು, ಹೊನ್ನನಾಯಕನಹಳ್ಳಿ, ಓಬೇನಹಳ್ಳಿ, ಎಕ್ಕೆಗೊಂದಿ, ಕುಮಾರನಹಳ್ಳಿ, ಅಂದನೂರು, ಗ್ಯಾರಳ್ಳಿ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳಿಂದ ನಿತ್ಯ ನೂರಾರು ವಿದ್ಯಾರ್ಥಿನಿಯರು ಬಂದು ಹೋಗುತ್ತಾರೆ. ಸೂಕ್ತ ಸಮಯಕ್ಕೆ ಬಸ್ ಸಂಪರ್ಕವಿಲ್ಲದೆ ವಿದ್ಯಾರ್ಥಿನಿಯರು ಕಾಲೇಜಿಗೆ ತಲುಪಲು ತೊಂದರೆ ಅನುಭವಿಸುತ್ತಿದ್ದಾರೆ. ಬಿಸಿಎಂ ಅಥವಾ ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ನಿಲಯ ಪ್ರಾರಂಭಿಸಿದರೆ, ದೂರದ ಊರುಗಳ ಹೆಣ್ಣುಮಕ್ಕಳಿಗೆ ಅನುಕೂಲವಾಗಿ ದಾಖಲಾತಿ ಪ್ರಮಾಣವೂ ಹೆಚ್ಚಾಗಲಿದೆ.