ಚನ್ನಗಿರಿ: ಮದುವೆ ಎಂಬುದು ಆಡಂಬರಕ್ಕೆ ಸೀಮಿತವಾಗದೆ ಸರಳವಾಗಿರಬೇಕು. ಅದು ಜೀವನವನ್ನು ಉತ್ತಮವಾಗಿ ಕಟ್ಟಿಕೊಳ್ಳುವಂತಿರಬೇಕು ಮತ್ತು ಎಲ್ಲರನ್ನೂ ಒಂದಾಗಿ ಬೆಸೆಯಬೇಕು" ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು. Wedding
ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ಸರ್ವಧರ್ಮ ವಧೂ-ವರರ ಸಮಾವೇಶ ಹಾಗೂ ಪಾಲಕರ ನೇರ ಸಂಪರ್ಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜಾತಿ-ಧರ್ಮದ ಬೇಲಿ ಹರಿದುಬರಲಿ
"ಪ್ರಸ್ತುತ ದಿನಮಾನಗಳಲ್ಲಿ ವಧೂ-ವರರ ಸಮಾವೇಶಗಳು ಅತ್ಯಗತ್ಯವಾಗಿವೆ. ಸಮಾಜದಲ್ಲಿ ಇರುವುದು ಗಂಡು ಮತ್ತು ಹೆಣ್ಣು ಎಂಬ ಎರಡೇ ಜಾತಿ. ಮಕ್ಕಳು ಪ್ರಾಪ್ತ ವಯಸ್ಕರಾದ ತಕ್ಷಣ ಪಾಲಕರಿಗೆ ಮದುವೆಯ ಒತ್ತಡ ಆರಂಭವಾಗುತ್ತದೆ. ಆದರೆ, ಇಂದು ಹೆಣ್ಣು ಹೆತ್ತವರು ಕಡ್ಡಾಯವಾಗಿ ಸರ್ಕಾರಿ ನೌಕರಿಯ ವರನನ್ನೇ ಬಯಸುತ್ತಿರುವುದರಿಂದ ಗ್ರಾಮೀಣ ಭಾಗದ ಯುವಕರಿಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ. ಜನರು ಜಾತಿ, ಧರ್ಮದ ಬೇಲಿಯಿಂದ ಹೊರಬಂದು ಒಂದಾಗಿ ಬದುಕಲು ಮುಂದಾಗಬೇಕು. ಆಡಂಬರದ ವಿವಾಹಗಳಿಗಿಂತ ಸರಳ ವಿವಾಹಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು" ಎಂದು ಶ್ರೀಗಳು ತಿಳಿಸಿದರು.
ದಾಂಪತ್ಯದ ಕುರಿತು ಮಾತನಾಡಿದ ಶ್ರೀಗಳು, "ಶಾಸ್ತ್ರ, ಸಂಪ್ರದಾಯ ಹಾಗೂ ಅದ್ದೂರಿಯಾಗಿ ಮಾಡಿದ ಎಷ್ಟೋ ಮದುವೆಗಳು ಕೆಲವೇ ದಿನಗಳಲ್ಲಿ ಮುರಿದುಬಿದ್ದ ನಿದರ್ಶನಗಳು ನಮ್ಮ ಕಣ್ಣಮುಂದಿವೆ. ದಾಂಪತ್ಯ ಯಶಸ್ವಿಯಾಗಲು ಪರಸ್ಪರ ಗೌರವ ಮತ್ತು ಹೊಂದಾಣಿಕೆಯ ಸಹಬಾಳ್ವೆ ಮುಖ್ಯ" ಎಂದರು.
ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ - ಮಾಡಾಳು ಬೇಸರ
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, "ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರು ತಮಗೆ ಸರಿಯಾದ ಜೋಡಿಯನ್ನು ಅಪೇಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಪಾಲಕರು ಹಿರಿಯರಾಗಿ ನೋಡಿ ನಿಶ್ಚಯಿಸಿದ ಸೂಕ್ತ ಜೋಡಿಯನ್ನು ಯುವ ಪೀಳಿಗೆ ಬೇಡ ಎನ್ನಬಾರದು. ಇಂದು ಗ್ರಾಮೀಣ ಭಾಗದಲ್ಲಿ ಮದುವೆಯಾಗದ ಎಷ್ಟೋ ಯುವಕರಿದ್ದಾರೆ. ಮುಖ್ಯವಾಗಿ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಪಾಲಕರು ಹಿಂಜರಿಯುತ್ತಿದ್ದಾರೆ. ಇಂತಹ ತಪ್ಪು ಕಲ್ಪನೆಗಳನ್ನು ಸಮಾಜದಿಂದ ಬಗೆಹರಿಸಿ, ಮೊದಲಿನಂತೆ ಸುಂದರ ಸಂಬಂಧಗಳನ್ನು ಬೆಸೆಯುವ ಕೆಲಸವಾಗಬೇಕು" ಎಂದು ಕಳಕಳಿ ವ್ಯಕ್ತಪಡಿಸಿದರು.
ಯುವ ಮುಖಂಡ ವಡ್ನಾಳ್ ಜಗದೀಶ್ ಮಾತನಾಡಿ, "ಕೇವಲ ಆಡಂಬರಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡಿ, ಕುಟುಂಬಗಳು ಸೇರಿ ಮಾಡಿದ ಮದುವೆಗಳು ಕೆಲವೇ ದಿನಗಳಲ್ಲಿ ಮುರಿದು ಬೀಳುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಪತಿ-ಪತ್ನಿಯರ ನಡುವೆ ನಂಬಿಕೆ ಮತ್ತು ಹೊಂದಾಣಿಕೆ ಇದ್ದರೆ ಮಾತ್ರ ಸಂಸಾರ ಸುಖಮಯವಾಗಿರುತ್ತದೆ" ಎಂದರು.
251 ವಧು, 600 ವರರ ಭಾಗಿ
ಮಠದಲ್ಲಿ ಜರುಗಿದ ಈ ಬೃಹತ್ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 251 ವಧು ಹಾಗೂ 600 ವರರ ಆಕಾಂಕ್ಷಿಗಳು ತಮ್ಮ ಪಾಲಕರೊಂದಿಗೆ ಪಾಲ್ಗೊಂಡು ಸೂಕ್ತ ಸಂಬಂಧಗಳಿಗಾಗಿ ಮಾಹಿತಿ ವಿನಿಮಯ ಮಾಡಿಕೊಂಡರು.
ಸಮಾವೇಶದಲ್ಲಿ ತುಮ್ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ರೋಣ ಶೇಖರಯ್ಯ ಶಾಸ್ತ್ರಿ, ಲಕ್ಷ್ಮೇಶ್ವರ ಸೋಮಶೇಖರ್ ದೊಡ್ಡಮನಿ, ತುಮ್ಕೋಸ್ ಮಾಜಿ ಅಧ್ಯಕ್ಷ ಆರ್.ಎಂ. ರವಿ, ದಾಕ್ಷಾಯಣಿ, ರಾಜೇಶ್ವರಿ ಕಾಕನೂರು, ನಾಗರಾಜ್ ಮುಗಳಿಹಳ್ಳಿ, ಧನಂಜಯ ಸಂತೆಬೆನ್ನೂರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.