ನಾರೀ ಶಕ್ತಿಯಿಂದ ಬೈಕ್ ರ‍್ಯಾಲಿ: ವಿಶ್ವ ಹಿಂದೂ ಪರಿಷತ್ ಆಯೋಜನೆ Vishwa Hindu Parishad

ಪೌರ ಕಾರ್ಮಿಕ ಮಹಿಳೆಯರಿಂದ ಚಾಲನೆ | ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆ
 Vishwa Hindu Parishad
ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಪೌರ ಕಾರ್ಮಿಕರಾದ ರತ್ನಮ್ಮ ಹಾಗೂ ಅಕ್ಕಮ್ಮ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಯಶವಂತರಾವ್ ಜಾಧವ್, ಸತೀಶ್ ಪೂಜಾರಿ, ಎಸ್.ಟಿ. ವೀರೇಶ್, ವಿನಾಯಕ ರಾನಡೆ, ಪ್ರಭಾವತಿ ವಿನಾಯಕ, ಅನಿತಾ ಪಟ್ಟಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. Vishwa Hindu Parishad
Published on: 

ದಾವಣಗೆರೆ: ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ವತಿಯಿಂದ ನಾಡಹಬ್ಬ ದಸರಾ ಪ್ರಯುಕ್ತ ನಗರದಲ್ಲಿ ಬುಧವಾರ ಮಹಿಳಾ ಬೈಕ್ ರ‍್ಯಾಲಿ ಸಂಭ್ರಮದಿಂದ ಜರುಗಿತು. Vishwa Hindu Parishad

ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಪೌರ ಕಾರ್ಮಿಕರಾದ ರತ್ನಮ್ಮ ಹಾಗೂ ಅಕ್ಕಮ್ಮ ಅವರು ರ‍್ಯಾಲಿಗೆ ಚಾಲನೆ ನೀಡಿದರು. ಕೇಸರಿ ಪೇಟ ಹಾಗೂ ಧ್ವಜಗಳೊಂದಿಗೆ ಉತ್ಸಾಹದಿಂದ ಪಾಲ್ಗೊಂಡಿದ್ದ ನೂರಾರು ಮಹಿಳೆಯರು ಭಾರತ ಮಾತೆ ಹಾಗೂ ಸನಾತನ ಹಿಂದೂ ಧರ್ಮಕ್ಕೆ ಜಯಘೋಷ ಮೊಳಗಿಸಿದರು. ವಂದೇ ಮಾತರಂ, ಜೈ ಶ್ರೀರಾಮ್, ಹರ ಹರ ಮಹಾದೇವ್ ಘೋಷಣೆಗಳು ಮೊಳಗಿದವು.

ರ‍್ಯಾಲಿಯು ಚರ್ಚ್ ರಸ್ತೆ, ವಿನೋಬನಗರ 2ನೇ ಮುಖ್ಯರಸ್ತೆ, ಕರ್ನಲ್ ರವೀಂದ್ರನಾಥ ಸರ್ಕಲ್, ಶಾರದಾಂಬ ದೇವಸ್ಥಾನ ರಸ್ತೆ, ಲಕ್ಷ್ಮಿ ಫ್ಲೋರ್‌ಮಿಲ್ ರಸ್ತೆ, ಬಿಐಇಟಿ ಕಾಲೇಜು ರಸ್ತೆ, ಗ್ರಾಮಾಂತರ ಪೊಲೀಸ್ ಠಾಣೆ ರಸ್ತೆ, ಎಚ್‌ಕೆಆರ್ ವೃತ್ತ, ಶಿವಪ್ಪಯ್ಯ ಸರ್ಕಲ್, ತ್ರಿಶೂಲ್ ಟಾಕೀಸ್ ರಸ್ತೆ ಹಾಗೂ ಪಿಬಿ ರಸ್ತೆ ಮೂಲಕ ಸಾಗಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನವನ್ನು ತಲುಪಿತು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಧರ್ಮದ ಜಾಗೃತಿ ಮೂಡಿಸುವುದರ ಜತೆಗೆ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ ಎಲ್ಲಾ ರಂಗಗಳಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಸಾರಲು ಈ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮಿತಿಯ ಶೋಭಾ ಕೊಟ್ರೇಶ್ ಮಾತನಾಡಿ, ಸಶಕ್ತ ಮಹಿಳೆಯರನ್ನು ಮುನ್ನೆಲೆಗೆ ತರುವುದು ಹಾಗೂ ಅವರಲ್ಲಿ ಜಾಗೃತಿ ಮೂಡಿಸುವುದು ರ‍್ಯಾಲಿಯ ಮುಖ್ಯ ಉದ್ದೇಶವಾಗಿದೆ. ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿದಿನ ಶಾಸ್ತ್ರೋಕ್ತ ಪೂಜೆ ಹಾಗೂ ಸಂಜೆ ಲಲಿತಾ ಸಹಸ್ರನಾಮ ಪಠಣ ನೆರವೇರಿಸಲಾಗುತ್ತಿದೆ. ಇದೇ ವೇಳೆ ಸಮಾಜ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯ ಸಹ ಸಂಚಾಲಕಿ ಪ್ರಭಾವತಿ ವಿನಾಯಕ, ಸದಸ್ಯರಾದ ಅನಿತಾ ಪಟ್ಟಣಶೆಟ್ಟಿ, ಭಾಗ್ಯಾ ಪಿಸಾಳೆ, ಚೇತನಾ ಶಿವಕುಮಾರ್, ನಾಗವೇಣಿ, ಭಾರತಿ, ಗಾಯತ್ರಿ, ಮಧು, ಶಾಂತಾ ದೊರೆ, ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್, ಮುಖಂಡರಾದ ವಿನಾಯಕ ರಾನಡೆ, ಶಿವಪ್ರಕಾಶ್, ಬಾಲಚಂದ್ರ ಶ್ರೇಷ್ಠಿ, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ಕಿಶೋರ್‌ಕುಮಾರ್, ಮಲ್ಲಿಕಾರ್ಜುನ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net