ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ

ಜಂಬೂಸವಾರಿ, ಟಾರ್ಚ್‌ಲೈಟ್ ಪರೇಡ್, ಡ್ರೋನ್ ಶೋಗೆ ಪ್ರತ್ಯೇಕ ಟಿಕೆಟ್
ದಸರಾ ಗೋಲ್ಡ್ ಕಾರ್ಡ್
ದಸರಾ ಗೋಲ್ಡ್ ಕಾರ್ಡ್
Published on

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಪ್ರಮುಖ ಕಾರ್ಯಕ್ರಮಗಳ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್‌ಗಳ ಮಾರಾಟಕ್ಕೆ ಸೋಮವಾರದಿಂದ ಚಾಲನೆ ದೊರೆತ್ತಿದೆ. ಜಂಬೂಸವಾರಿ, ಟಾರ್ಚ್‌ಲೈಟ್ ಪರೇಡ್ ಹಾಗೂ ಡ್ರೋನ್ ಶೋ ವೀಕ್ಷಣೆಗೆ ಪ್ರತ್ಯೇಕ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಮೈಸೂರು ದಸರಾ-2026ರ ಅಧಿಕೃತ ಜಾಲತಾಣದ ಮೂಲಕ ಗೋರ್ಲ್ಡ್ ಕಾರ್ಡ್ ಹಾಗೂ ಟಿಕೆಟ್‌ಗಳನ್ನು ಪಡೆದುಕೊಳ್ಳಬಹುದು. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅ.17 ಮತ್ತು 18ರಂದು ಡ್ರೋನ್ ಶೋ ನಡೆಯಲಿದ್ದು, ಪ್ರತಿ ದಿನದ ಕಾರ್ಯಕ್ರಮಕ್ಕೆ 1,000ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಅ.21ರಂದು ನಡೆಯುವ ಜಂಬೂಸವಾರಿಯನ್ನು ಅರಮನೆ ಆವರಣದಲ್ಲಿ ವೀಕ್ಷಿಸಲು 3,500 ರೂ. ಹಾಗೂ ಅದೇ ದಿನ ಬನ್ನಿಮಂಟಪದಲ್ಲಿ ನಡೆಯುವ ಟಾರ್ಚ್‌ಲೈಟ್ ಪರೇಡ್‌ಗೆ -1,500 ರೂ. ಟಿಕೆಟ್ ನಿಗದಿ ಪಡಿಸಲಾಗಿದೆ.

ಆಸನಗಳಿಗೆ ಸಂಖ್ಯೆ: ದಸರಾ ಜಂಬೂಸವಾರಿ ವೀಕ್ಷಿಸಲು ಹಣ ನೀಡಿ ಗೋಲ್ಡ್ ಕಾರ್ಡ್ ಪಡೆದರೂ ಸೂಕ್ತ ಆಸನ ದೊರೆಯದೆ ಪರದಾಡುವುದು ಸಾಮಾನ್ಯವಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಬಾರಿ ಪ್ರತಿಯೊಂದು ಗೋಲ್ಡ್ ಕಾರ್ಡ್‌ಗಳಿಗೆ ಪ್ರತ್ಯೇಕ ಸಂಖ್ಯೆ ನಮೂದಿಸಲಾಗುವುದು. ಕಾರ್ಡ್‌ನಲ್ಲಿರುವ ಅದೇ ಸಂಖ್ಯೆಯನ್ನು ಸಂಬಂಧಿಸಿದ ಆಸನದ ಮೇಲೂ ನಮೂದಿಸಲಾಗುತ್ತದೆ. ಹೀಗಾಗಿ ಗೋಲ್ಡ್ ಕಾರ್ಡ್ ಟಿಕೆಟ್ ಹೊಂದಿರುವವರು ತಮ್ಮ ಸಂಖ್ಯೆಗೆ ನಿಗದಿಪಡಿಸಿರುವ ಆಸನದಲ್ಲಿಯೇ ಕುಳಿತುಕೊಳ್ಳಲು ಸಾಧ್ಯವಾಗಲಿದೆ. ಬೇರೆಯವರು ಆಸನಗಳನ್ನು ಆಕ್ರಮಿಸಿಕೊಳ್ಳುವುದಕ್ಕೂ ಇದರಿಂದ ಕಡಿವಾಣ ಬೀಳಲಿದೆ.

ಗೋಲ್ಡ್ ಕಾರ್ಡ್ ಹೊಂದಿದ್ದರೂ ಆಸನದ ಕೊರತೆ ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಬಾರಿ ವಿತರಣಾ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗಿದೆ. ಅಲ್ಲದೆ, ಉಚಿತವಾಗಿ ವಿಐಪಿಗಳಿಗೆ ಗೋಲ್ಡ್ ಕಾರ್ಡ್ ವಿತರಿಸುವುದನ್ನು ನಿಲ್ಲಿಸಲಾಗಿದೆ. ಕಳೆದ ವರ್ಷ ಗೋಲ್ಡ್ ಕಾರ್ಡ್‌ಗೆ 6,500 ರೂ.ದರ ನಿಗದಿಪಡಿಸಲಾಗಿತ್ತು. ಈ ಬಾರಿಯೂ ಅದೇ ದರವನ್ನು ಮುಂದುವರಿಸಲಾಗಿದೆ.

ಗೋಲ್ಡ್ ಕಾರ್ಡ್ ಪಡೆದವರು ಜಂಬೂಸವಾರಿ, ಪಂಜಿನ ಕವಾಯತು, ಚಾಮುಂಡಿಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಮೈಸೂರು ಅರಮನೆ ಹಾಗೂ ಒಂದು ದಿನದ ಡ್ರೋನ್ ಶೋ ಅನ್ನು ದಸರಾ ಉತ್ಸವ ಸಂದರ್ಭ ವೀಕ್ಷಿಸಲು ಅವಕಾಶ ನೀಡಲಾಗುವುದು. ಒಂದು ಗೋಲ್ಡ್ ಕಾರ್ಡ್‌ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಾವಕಾಶ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net