

ಪಾಂಡವಪುರ: ಸಮಾಜದಲ್ಲಿನ ಜಾತಿ ವ್ಯವಸ್ಥೆ ತೊಲಗಿಸಿ, ಅಸ್ಪಶ್ಯತೆ ಹೋಗಲಾಡಿಸಲು ಎಲ್ಲ ದಾರ್ಶನಿಕರು ಹೋರಾಟ ನಡೆಸಿದ್ದರೆ ವಿನಾ ತಮ್ಮ ಜಾತಿ ಅಭಿವೃದ್ಧಿಗೆ ಯಾರೂ ಮನ್ನಣೆ ನೀಡಲಿಲ್ಲ ಎಂದು ತಹಸೀಲ್ದಾರ್ ಎಸ್.ಸಂತೋಷ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತಸೌಧದಲ್ಲಿ ತಾಲೂಕು ಆಡಳಿತ ಮತ್ತು ಸವಿತಾ ಸಮಾಜದಿಂದ ಮಂಗಳವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನ ಸಮಕಾಲೀನರಾಗಿದ್ದ ಎಲ್ಲ ಮಹನೀಯರು ತಮ್ಮ ಜಾತಿಯ ಉದ್ಧಾರಕ್ಕಾಗಿ ಹೋರಾಟ ಮಾಡಲಿಲ್ಲ. ಸಮಾಜದ ಸರಿ, ತಪ್ಪುಗಳನ್ನು ತಿದ್ದಿ ಮನುಕುಲದ ಏಳಿಗೆಗಾಗಿ ಶ್ರಮಿಸಿದ್ದರು. ಮೇಲು-ಕೀಳು ಎಂಬ ಭಾವನೆಯನ್ನು ತೊಡೆದು ಹಾಕಲು ಅನೇಕ ಮಹನೀಯರು ಅಂದಿನ ಕಾಲದಲ್ಲೇ ಶ್ರಮಿಸಿದ್ದರು. ಜಾತಿ ವ್ಯವಸ್ಥೆಯ ಮನೋವಿಕಾರತೆಗೆ ಬಸವಣ್ಣ ಕಡಿವಾಣ ಹಾಕಿದ್ದರು. ಅದಕ್ಕಾಗಿಯೇ ನನ್ನನ್ನು ಭೇಟಿ ಮಾಡುವ ಮುನ್ನ ಹಡಪದ ಅಪ್ಪಣ್ಣ ಅವರನ್ನು ಭೇಟಿ ಮಾಡಿ ಬನ್ನಿ ಎಂದು ಹೇಳುತ್ತಿದ್ದರು. ಇದರ ಅರ್ಥ ಜಾತಿಯ ವಿಷ ಬೀಜವನ್ನು ಮನಸ್ಸಿನಿಂದ ತೊಲಗಿಸುವುದಾಗಿತ್ತು ಎಂದು ಹೇಳಿದರು.
ಸವಿತಾ ಸಮಾಜದ ತಾಲೂಕು ಕಾರ್ಯದರ್ಶಿ ಶಶಿಧರ್ ಮಾತನಾಡಿ, ಗುರುಕುಲ ಪರಂಪರೆ ನಾಶವಾದ ಪರಿಣಾಮ 12ನೇ ಶತಮಾನದ ನಂತರ ದಾರ್ಶನಿಕರು ಹುಟ್ಟಲೇ ಇಲ್ಲ. ಇಂದಿನ ಶಿಕ್ಷಣ ವ್ಯಾಪಾರೀಕರಣವಾಗಿ ಬದಲಾಗಿದೆ. ದಾರ್ಶನಿಕರು ಮತ್ತು ಗುರುಕುಲಗಳು ಜೀವನದ ಜತೆ ಸಂಸ್ಕಾರ ಹೇಳಿಕೊಡುತ್ತಿದ್ದವು. ಬಸವಣ್ಣನ ಅನುಭವ ಮಂಟಪ ಸಂವಿಧಾನ ರಚನೆಗೆ ಪೀಠಿಕೆಯಾಗಿದೆ. ನಾವು ಆಧ್ಯಾತ್ಮಿಕ ಪರಂಪರೆ ಅಳವಡಿಸಿಕೊಳ್ಳದಿದ್ದರೆ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿಲ್ಲ. ದೇವರ ಮತ್ತು ದೇವಸ್ಥಾನಗಳು ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಮನುಷ್ಯ ಎಷ್ಟೇ ಗಳಿಸಿದರೂ ಇನ್ನಷ್ಟು ಬೇಕು ಎಂಬ ತುಡಿತದಲ್ಲಿದ್ದಾನೆ. ಅತಿ ಆಸೆ ಸಮಾಜದ ಸ್ವಾಸ್ಥ್ಯಕ್ಕೆ ಮಾರಕ ಎಂದರು.
ಶಿರಸ್ತೇದಾರ್ ಮೋಹನ್, ಕಂದಾಯ ಅಧಿಕಾರಿ ಮಹದೇವು, ವರುಣ್, ಮುಖಂಡರಾದ ಸಿ.ಆರ್.ರಮೇಶ್, ಡಿ.ಕೆ.ಅಂಕಯ್ಯ, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ನಂದೀಶ್, ಉಪಾಧ್ಯಕ್ಷ ತಮ್ಮಣ್ಣ, ನಿರ್ದೇಶಕ ಸ್ವಾಮಣ್ಣ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ದೇವರಾಜು ಇದ್ದರು.