

ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪೂರ್ತಿಗೊಳಿಸಿದ್ದು, ದರ್ಶನ್ ಮತ್ತು ಗ್ಯಾಂಗ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಅತ್ತ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುತ್ತಿದ್ದಂತೆ ಇತ್ತ ದರ್ಶನ್ಗೆ ಟೆನ್ಷನ್ ಹೆಚ್ಚಾಗಿದ್ದು, ಇದರ ನಡುವೆಯೇ ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿ ಮಾತನಾಡಿದ್ದಾರೆ.
ಪ್ರಿಸನ್ ಕಾಲ್ ಸಿಸ್ಟಮ್ನಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಂಬರ್ಅನ್ನು ಸೇವ್ ಮಾಡಲಾಗಿದ್ದು, ಐದು ನಿಮಿಷಗಳ ಕಾಲ ಪತ್ನಿಯೊಂದಿಗೆ ದರ್ಶನ್ ಮಾತುಕತೆ ನಡೆಸಿದ್ದಾರೆ. ಮಧ್ಯಾಹ್ನ 2:30ರ ಸುಮಾರಿಗೆ ಪತ್ನಿಗೆ ಕರೆ ಮಾಡಿದ ದರ್ಶನ್ ಚಾರ್ಜ್ಶೀಟ್ ಸಲ್ಲಿಕೆ ಮತ್ತು ಇಂದಿನ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದ್ದಾರೆ.
ಮಾತನಾಡುವ ವೇಳೆ ಪತಿಯ ಆರೋಗ್ಯವನ್ನು ವಿಜಯಲಕ್ಷ್ಮಿ ವಿಚಾರಿಸಿದ್ದು, ಈ ವೇಳೆ ಭಾವುಕರಾಗಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ನಡುವಿನ ಸಂಭಾಷಣೆಯನ್ನು ನಿಯಮದ ಪ್ರಕಾರ ಜೈಲಧಿಕಾರಿಗಳು ರೆಕಾರ್ಡ್ ಮಾಡಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ನಟ ದರ್ಶನ್ರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಸ್ಥಳಾಂತರಿಸಲಾಗಿದ್ದು, ಉಳಿದ ಆರೋಪಿಗಳನ್ನು ತುಮಕೂರು, ಶಿವಮೊಗ್ಗ, ಮೈಸೂರು, ವಿಜಯಪುರ, ಧಾರವಾಡ ಹಾಗೂ ಬೆಳಗಾವಿಗೆ ಸ್ಥಳಾಂತರಿಸಲಾಗಿದೆ.