ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಿ : ದರೆಗುಡ್ಡೆ ಪಂಚಾಯಿತಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಒತ್ತಾಯ

04
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವರನ್ನು ಸಿಸಿ ಕ್ಯಾಮರಾ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಸಂಜೀವಿನಿ ಕಟ್ಟಡದ ಸಭಾಂಗಣದಲ್ಲಿ ದರೆಗುಡ್ಡೆ ಗ್ರಾಮ ಪಂಚಾಯಿತಿ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಈ ಕುರಿತು ಗ್ರಾಮಸ್ಥರು ಪ್ರಸ್ತಾಪಿಸಿದರು.

ಗ್ರಾಮಸ್ಥ ವಿನ್ಸೆಂಟ್ ಮಾತನಾಡಿ, ಎಲ್ಲೆಂದರಲ್ಲಿ ಕಸ ಬಿಸಾಡುವವರನ್ನು ಸಿಸಿ ಕ್ಯಾಮರಾ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸಬೇಕೆಂದು ಆಗ್ರಹಿಸಿದರು.

ನೋಡಲ್ ಅಧಿಕಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಮಾತನಾಡಿ, ಕಸವನ್ನು ಸಿಕ್ಕಿದ್ದಲ್ಲಿ, ರಸ್ತೆ ಬದಿಗಳಲ್ಲಿ ಬಿಸಾಡದೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಅತೀ ಹೆಚ್ಚು ಮಾನವ ದಿನಗಳನ್ನು ಅಳವಡಿಸಿಕೊಳ್ಳುವ ಮೂಲಕ ದರೆಗುಡ್ಡೆ ಗ್ರಾ.ಪಂ. ಮೂಡುಬಿದಿರೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಈ ಬಾರಿಯೂ ಅದೇ ಸ್ಥಾನ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಅಧ್ಯಕ್ಷತೆ ವಹಿಸಿದರು. ಪಿಡಿಒ ರಾಜು ಮಾತನಾಡಿ, ಸ್ವಚ್ಛತೆಯ ವಾಹನಕ್ಕೆ ಕಸವನ್ನು ನೀಡುವವರು ಹಸಿ ಕಸ, ಒಣ ಕಸವನ್ನು ವಿಂಗಡನೆ ಮಾಡಿ ನೀಡಬೇಕು. ಮನೆ ತೆರಿಗೆ, ನೀರಿನ ತೆರಿಗೆ ಉದ್ಯಮ ಲೈಸನ್ಸ್ ಫೀಸ್ ಮತ್ತು ಭೂಕಂದಾಯವನ್ನು ಕ್ಲಪ್ತ ಸಮಯದಲ್ಲಿ ಪಾವತಿಸಬೇಕು ಎಂದರು.

ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಉಪಾಧ್ಯಕ್ಷೆ ನಳಿನಿ, ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ಬಿಲ್ ಕಲೆಕ್ಟರ್ ನಯನಾ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಸುನಂದಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net