

*ಚನ್ನಮಾನಹಳ್ಳಿ-ವಿಭೂತಿಕೆರೆ ಮಾರ್ಗದಲ್ಲಿ ಗುಂಡಿ ಬಿದ್ದು ಏರುಪೇರು
*ಡಾಂಬರು ಹಾಕಿದರೂ ತಪ್ಪದ ಸಮಸ್ಯೆ
ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಹೋಬಳಿಯ ಚನ್ನಮಾನಹಳ್ಳಿ-ವಿಭೂತಿಕೆರೆ ರಸ್ತೆಯಲ್ಲಿ ಜಲಮಂಡಳಿ ಪೈಪ್‌ಲೈನ್ ಅಳವಡಿಸಿರುವ ಜಾಗದಲ್ಲಿ ಡಾಂಬರು ಹಾಕಿದರೂ ಅಲ್ಲಲ್ಲಿ ಗುಂಡಿ ಬಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.
ತೊರೆಕಾಡನಹಳ್ಳಿಯಿಂದ ರಾಮನಗರಕ್ಕೆ 24/7 ಕುಡಿಯುವ ನೀರು ಸರಬರಾಜು ಯೋಜನೆಯಡಿ ಹೊಸದೊಡ್ಡಿ, ವಿಭೂತಿಕೆರೆ, ಅಂಜನಾಪುರ, ಚಿಕ್ಕೇನಹಳ್ಳಿ, ಚನ್ನಮಾನಹಳ್ಳಿ ಮೂಲಕ ದೊಡ್ಡಗಾತ್ರದ ಪೈಪ್ ಅಳವಡಿಸಿ ನೀರು ಸರಬರಾಜು ಮಾಡಲಾಗಿದೆ.
ಪೈಪ್ ಹಾಕಿರುವ ಸ್ಥಳದಲ್ಲಿ ಡಾಂಬರು ಹಾಕಲಾಗಿದೆ. ಆದರೆ, ವಿಭೂತಿಕೆರೆ, ಚನ್ನಮಾನಹಳ್ಳಿ, ಚಿಕ್ಕೇನಹಳ್ಳಿ, ಅಂಜನಾಪುರ, ಹೊಸದೊಡ್ಡಿ ಗ್ರಾಮಗಳ ಬಳಿ ಡಾಂಬರು ಹಾಕಿರುವ ಅಲ್ಲಲ್ಲಿ ಗುಂಡಿಗಳಾಗಿವೆ. ಜತೆಗೆ ಹೊಸದೊಡ್ಡಿ, ವಿಭೂತಿಕೆರೆ, ಚಿಕ್ಕೇನಹಳ್ಳಿ ಬಳಿ ಗುಂಡಿಗಳು ಮತ್ತು ಕೊಳವೆಯಾಕಾರದಲ್ಲಿ ಕುಳಿಗಳು ಮೂಡಿವೆ.
ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುವವರು ಅಪಾಯಕ್ಕೆ ಸಿಲುಕುವಂತಾಗಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ರಸ್ತೆ ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸಿ ಡಾಂಬರು ಹಾಕಿದ್ದರಿಂದ ಒಂದೇ ರಸ್ತೆ ಎರಡು ರಸ್ತೆಗಳಂತೆ ಕಾಣುತ್ತಿದೆ. ಒಂದು ರಸ್ತೆ ಎತ್ತರವಿದ್ದರೆ ಮತ್ತೊಂದು ತಗ್ಗಾಗಿದೆ. ಕೆಲವು ಕಡೆ ಹಳ್ಳ ದಿಣ್ಣೆ ತಗ್ಗು ನಿರ್ಮಾಣವಾಗಿದ್ದು, ಸುಗಮ ಸಂಚಾರಕ್ಕೆ ತೊಡಕಾಗಿದೆ.
ರಸ್ತೆ ಸಮತಟ್ಟಾಗಿರದೆ ಅಲ್ಲಲ್ಲಿ ತಗ್ಗು-ದಿಣ್ಣೆ ಆಗಿರುವ ಕಾರಣ ಎದುರುಗಡೆ ಬಂದ ವಾಹನಕ್ಕೆ ದಾರಿ ಬಿಡಲು ಪಕ್ಕದಲ್ಲಿ ರಸ್ತೆಯೇ ಇಲ್ಲ. ಗುಂಡಿಗಳಿಗೆ ವಾಹನ ಇಳಿದು ಚಕ್ರಗಳು ನಿಯಂತ್ರಣ ತಪ್ಪಿ ಬಿದ್ದು ಅಪಾಯ ತಂದುಕೊಳ್ಳಬಹುದಾದ ಸಂಭವವೇ ಹೆಚ್ಚಿದೆ. ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಮಾಡಿಕೊಂಡ ಉದಾಹರಣೆಗಳು ಕಣ್ಣಮುಂದಿವೆ.
ಪೈಪ್ ಅಳವಡಿಸಿದ ಜಾಗದಲ್ಲಿ ರಸ್ತೆ ಅಭಿವೃದ್ಧಿಪಡಿಸಿ ಡಾಂಬರು ಹಾಕಲಾಗಿತ್ತು. ಆದರೆ, ಪೈಪಿನ ಅಕ್ಕಪಕ್ಕ ಸರಿಯಾಗಿ ಮಣ್ಣು ಕೂರದೆ ಮಳೆಗಾಲದಲ್ಲಿ ರಸ್ತೆ ಇಳಿದಿದೆ. ಇದರಿಂದ ಉಬ್ಬು, ತಗ್ಗು, ಹಳ್ಳ ದಿಣ್ಣೆಯಾಗಿದ್ದು, ವಾಹನ ಸವಾರರ ಓಡಾಟಕ್ಕೆ ಸಮಸ್ಯೆಯಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ರಸ್ತೆ ಸರಿಪಡಿಸಲು ಮುಂದಾಗಬೇಕು.ಯೋಗೇಶ್, ಹೊಸದೊಡ್ಡಿ.ಪೈಪ್‌ಲೈನ್ ಹಾಕಿದ ಜಾಗದಲ್ಲಿ ಗುಣಮಟ್ಟದ ಡಾಂಬರ್ ಹಾಕಿ ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ಮಳೆಗಾಲದಲ್ಲಿ ಮಣ್ಣು ಕೂರು ರಸ್ತೆ ಮಧ್ಯೆ ಹಳ್ಳ ದಿಣ್ಣೆಯಾಗಿದೆ. ಅಂತಹ ಸ್ಥಳಗಳಲ್ಲಿ ರಸ್ತೆ ಸಮಸ್ಯೆ ಸರಿಪಡಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಸುತ್ತೇವೆ. ಹೆಸರು ಹೇಳಲು ಇಚ್ಛಿಸದ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ರಾಮನಗರ.