ಅಪಾಯ ಆಹ್ವಾನಿಸುವ ಪ್ಯಾನಲ್​ ಬೋರ್ಡ್​ಗಳು

panel board
Published on

* ಪ್ರಮುಖ ವೃತ್ತ, ರಸ್ತೆ ಬದಿಗಳ ವಿದ್ಯುತ್​ ಕಂಬಗಳಿಗೆ ಅಳವಡಿಕೆ

* ಮಕ್ಕಳು, ಪಾದಚಾರಿಗಳು ನಡೆದಾಡಲು ಕಷ್ಟ

ಎಂ.ಎಸ್​.ಸಿದ್ದಲಿಂಗೇಶ್ವರ ಮಾಗಡಿ

ಪಟ್ಟಣದಲ್ಲಿ ನೀರಿನ ದಾಹ ನೀಗಿಸಲು ಕೊರೆಸಿರುವ ಕೊಳವೆಬಾವಿಯ ವಿದ್ಯುತ್​ ಪ್ಯಾನಲ್​ ಬೋರ್ಡ್​ಗಳು ನಾಗರಿಕರ ಪ್ರಾಣಕ್ಕೆ ಕುತ್ತು ತಂದೊಡ್ಡಿವೆ.

ಹೌದು, ಪುರಸಭೆ ವ್ಯಾಪ್ತಿಯ 23 ವಾರ್ಡ್​ಗಳಲ್ಲಿ ಕುಡಿಯುವ ನೀರೊದಗಿಸುವ ಬಹುತೇಕ ಕೊಳವೆಬಾವಿಗಳ ಪ್ಯಾನಲ್​ ಬೋರ್ಡ್​ಅನ್ನು ವಿದ್ಯುತ್​ ಕಂಬಕ್ಕೆ ಕಟ್ಟಿರುವುದೇ ಇದಕ್ಕೆ ಸಾಕ್ಷಿಯಾಗಿದ್ದು, ಹಲವೆಡೆ ವಿದ್ಯುತ್​ ಅವಘಡಗಳಿಗೆ ಆಹ್ವಾನ ನೀಡುವಂತಿದೆ.

ಪಟ್ಟಣದ ತಿರುಮಲೆ, ಗೌರಮ್ಮನ ಕೆರೆ ಬೀದಿ, ರಾವೇಂದ್ರ ದೇವಾಲಯ ಬಳಿ, ತರಕಾರಿ ಮಾರುಕಟ್ಟೆ ಬಳಿ ಹಾಗೂ ಪ್ರಮುಖ ವೃತ್ತ, ರಸ್ತೆ ಬದಿಗಳಲ್ಲಿ ಈ ಪ್ಯಾನಲ್​ ಬೋರ್ಡ್​ಗಳನ್ನು ವಿದ್ಯುತ್​ ಕಂಬಗಳಿಗೆ ನೇತು ಹಾಕಲಾಗಿದೆ. ಇವು ಮಳೆ, ಗಾಳಿಗೆ ಹಾಳಾಗಿ ತುಕ್ಕು ಹಿಡಿದಿವೆ. ಜತೆಗೆ ಸಮರ್ಪಕ ನಿರ್ವಹಣೆ ಮಾಡದೆ ಅಧ್ವಾನಗೊಂಡಿವೆ.

ಪುರಸಭೆಯ ನೀರುಗಂಟಿಗಳು ನಿತ್ಯವೂ ಈ ಪ್ಯಾನಲ್​ ಬೋರ್ಡ್​ನಲ್ಲಿನ ಸ್ವಿಚ್​ ಆನ್​ ಮಾಡಿಯೇ ನೀರು ಪೂರೈಸಬೇಕು. ಈ ವೇಳೆ ಸಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು ಗ್ಯಾರಂಟಿ.

ಗಿಡಗಂಟಿಗಳ ತೆರವಿಲ್ಲ

ಫ್ಯಾನಲ್​ ಬೋರ್ಡ್​ಗಳಲ್ಲಿ ವಿದ್ಯುತ್​ ಮೀಟರ್​, ಸ್ವಿಚ್​ಗಳು ಮಳೆ ಬಂದರೆ ನೆನೆದು ಗ್ರೌಂಡ್​ ಆಗಿ ಕಂಬದ ಸುತ್ತಮುತ್ತ ನಾಗರಿಕರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ನೆಲದಮಟ್ಟದಲ್ಲಿ ಅಳವಡಿಸಿರುವ ಪ್ಯಾನಲ್​ ಬೋರ್ಡ್​ ಬಳಿ ಗಿಡ, ಗಂಟಿಗಳು ಬೆಳೆದು ವಿಷಜಂತುಗಳ ವಾಸಸ್ಥಳವಾಗಿದೆ. ಕತ್ತಲಲ್ಲಿ ಮೋಟಾರ್​ಗಳ ಸ್ವಿಚ್​ಆನ್​ ಮಾಡಲು ಮುಂದಾದರೆ ವಿಷ ಜಂತುಗಳು ಪ್ರತ್ಯಕ್ಷವಾಗುತ್ತವೆ. ಆದರೂ ಗಿಡ, ಗಂಟಿಗಳನ್ನು ಸ್ವಚ್ಛ ಮುಂದಾಗದೆ ರ್ನಿಲಸಿದ್ದಾರೆ.

ಕಳ್ಳರ ಪಾಲು

ಬಹುತೇಕ ಕಡೆ ಪ್ಯಾನಲ್​ ಬೋರ್ಡ್​ ಕಿತ್ತುಹೋಗಿವೆ. ಇದರಿಂದ ಬೆಲೆ ಬಾಳುವ ಸ್ವೀಚ್​ ಬೋರ್ಡ್​ಗಳನ್ನು ಕಳ್ಳರು ಕಿತ್ತುಹಾಕುವುದು ಸಾಮಾನ್ಯ ಎಂಬಂತಾಗಿದೆ. ಇದರಿಂದ ಪುರಸಭೆಯ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಇದರಿಂದ ನಾಗರಿಕರ ತೆರಿಗೆಗೆ ಬೆಲೆ ಇಲ್ಲದಂತಾಗಿದೆ ಎಂಬುದು ಸ್ಥಳಿಯ ನಿವಾಸಿಗಳ ಆರೋಪ.

ಪ್ರಾಣಹಾನಿ ಸಂಭವ

ಗೌರಮ್ಮನ ಕೆರೆ ಬೀದಿ ಬಳಿ ಅಳವಡಿಸಿರುವ ಪ್ಯಾನಲ್​ ಬೋರ್ಡ್​ಗೆ ಬೀಗ ಹಾಕಿಲ್ಲ. ಈ ರಸ್ತೆಯಲ್ಲಿ ಸರಸ್ವತಿ, ಮಂಗಳ ವಿದ್ಯಾಕೇಂದ್ರ, ಬಿಜಿಎಸ್​ ಕಾಲೇಜು, ಶ್ರೀರಂಗನಾಥ ಸ್ವಾಮಿ ಪ್ರೌಢಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಪ್ರಾಣಹಾನಿ ಸಂಭವಿಸುವ ಮುನ್ನ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲಿ ಎಂಬುದು ನಾಗರಿಕರ ಆಗ್ರಹವಾಗಿದೆ,

ಪಟ್ಟಣದ ಬಹುತೇಕ ಎಲ್ಲ ಪ್ಯಾನಲ್​ ಬೋರ್ಡ್​ಗಳು ವಿದ್ಯುತ್​ ಕಂಬಕ್ಕೆ ಕೈಗೆ ಎಟಕುವಂತೆ ಕಟ್ಟಿರುವುದರಿಂದ ಪಾಲಕರು ಮಕ್ಕಳನ್ನು ಒಬ್ಬಂಟಿಯಾಗಿ ಶಾಲೆಗಳಿಗೆ ಕಳುಹಿಸಲು ಭಯ ಪಡುವಂತಾಗಿದೆ. ರಸ್ತೆ ಬದಿಯ ವಿದ್ಯುತ್​ ಕಂಬಕ್ಕೆ ಕಟ್ಟಿರುವುದರಿಂದ ಪಾದಚಾರಿಗಳು ಜೀವವನ್ನು ಕೈಯಲ್ಲಿಟ್ಟುಕೊಂಡು ತಿರುಗಾಡುವಂತಾಗಿದೆ. ಇಂತಹ ಸ್ಥಿತಿ ಯಾರಿಗೂ ಬೇಡ.ಶಿವಲಿಂಗಯ್ಯ, ನಿವೃತ್ತ ವಾಯುಸೇನಾ ಅಧಿಕಾರಿ

ಶಿವರುದ್ರಯ್ಯ, ಪುರಸಭೆ ಮುಖ್ಯಾಧಿಕಾರಿ

ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯುತ್​ ಕಂಬಕ್ಕೆ ಅಳವಡಿಸಿರುವ ಕೊಳವೆ ಬಾವಿಗಳ ಪ್ಯಾನಲ್​ ಬೋರ್ಡ್​ಗಳನ್ನು ತೆರವುಗೊಳಿಸಿ ಬೇರೆಡೆ ನಿರ್ಮಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net