

ಗುರುಪುರ: ಮಂಗಳೂರು - ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಕುಡುಪುವಿಗೆ ಹತ್ತಿರದ ಬೈತುರ್ಲಿಯಲ್ಲಿ ಸಂಪೂರ್ಣ ಕುಸಿದಿರುವ ತಂಗುದಾಣ (ಬಸ್-ಸ್ಟ್ಯೇಂಡ್) ಪ್ರಯಾಣಿಕರ ಬಲಿ ಪಡೆಯುವ ಖೆಡ್ಡಾದಂತೆ ಮಾರ್ಪಾಡಾಗಿದೆ.
2001ರ ವರೆಗೆ ಕುಡುಪು ಗ್ರಾ.ಪಂ. ವ್ಯಾಪ್ತಿಯಲ್ಲಿದ್ದ ಈ ತಂಗುದಾಣ ಈಗ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿದೆ. ಇದರ ಮೇಲ್ಛಾವಣಿ, ಪಕ್ಕಾಸು, ರೀಪುಗಳು ತುಂಡಾಗಿ ಬಿದ್ದಿವೆ. ತಂಗುದಾಣ ಕಟ್ಟಡದ ಹಿಂಭಾಗದ ಒಂದೆರಡು ಶೀಟುಗಳು ಬಿದ್ದಿದ್ದರೆ, ಇನ್ನು ಕೆಲವು ಶೀಟುಗಳು ನೇತಾಡುತ್ತಿವೆ. ಇವು ಯಾವುದೇ ಸಂದರ್ಭದಲ್ಲಿ ಬೀಳುವ ಸ್ಥಿತಿಯಲ್ಲಿದೆ. ಶಿಥಿಲ ತಂಗುದಾಣದಲ್ಲಿ ನೇತಾಡುತ್ತಿರುವ ಶೀಟುಗಳಿಂದ ಪ್ರಯಾಣಿಕರಿಗೆ ಅಪಾಯ ತಪ್ಪಿದ್ದಲ್ಲ.
ಮಂಗಳೂರು - ಮೂಡುಬಿದಿರೆ, ನೀರುಮಾರ್ಗ - ಮಲ್ಲೂರು - ಬಿ.ಸಿ.ರೋಡ್ ಸಂಪರ್ಕದ ಬೈತುರ್ಲಿ ಕೇಂದ್ರ ಪ್ರದೇಶದಿಂದ ಅನೇಕ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಕೈಕಂಬ - ಮೂಡುಬಿದಿರೆ - ಕಾರ್ಕಳದತ್ತ ಸಾಗುವ ಪ್ರಯಾಣಿಕರು, ವಯೋವೃದ್ಧರಿಗೆ ಇದು ಪ್ರಮುಖ ತಂಗುದಾಣವಾಗಿದೆ. ಬಸ್ ಪ್ರಯಾಣಿಕರು ಇಲ್ಲಿ ಬಿಸಿಲು - ಮಳೆಗೆ ಆಶ್ರಯ ಪಡೆದುಕೊಳ್ಳುವುದು ವಾಡಿಕೆ. ಇದೀಗ ಪ್ರಯಾಣಿಕರು ಇದರಿಂದ ವಂಚಿತರಾಗಿ ರಸ್ತೆಯಲ್ಲೇ ಬಸ್ ಕಾಯುವಂತಾಗಿದೆ.
ಮಂಗಳೂರು ನಗರ ಸ್ಮಾರ್ಟ್ ಸಿಟಿಯಾಗುತ್ತಿದ್ದರೂ, ಇದೇ ಮನಪಾ ವ್ಯಾಪ್ತಿಯಲ್ಲಿ ಇದೊಂದು ಸ್ಯಾಂಪಲ್ ತಂಗುದಾಣವಾಗಿದೆ ಎಂದು ಪ್ರಯಾಣಿಕರು ವ್ಯಂಗ್ಯವಾಡುತ್ತಿದ್ದಾರೆ. ರಸ್ತೆ, ಚರಂಡಿ ನಿರ್ಮಾಣದ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಇಲ್ಲೊಂದು ಸುಸಜ್ಜಿತ ತಂಗುದಾಣ ನಿರ್ಮಿಸಬೇಕು. ಇಲ್ಲವೇ ದುರಸ್ತಿ ಮಾಡಬೇಕು.- ಹರಿಶ್ಚಂದ್ರ ಕುಪ್ಪೆಪದವು, ನೀರುಮಾರ್ಗದ ನಿವಾಸಿ.