

* ಕಣ್ಮುಚ್ಚಿ ಕುಳಿತ ಇಲಾಖೆ ಇಲಾಖೆಗಳು
*ನಿತ್ಯ ಭಯದಲ್ಲೇ ಓಡಾಡುವ ಸಾರ್ವಜನಿಕರು
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ನಗರ ಮತ್ತು ಗ್ರಾಮೀಣ ಪ್ರದೇಶದ ರಸ್ತೆ ಅಕ್ಕ ಪಕ್ಕದಲ್ಲಿ ಒಣಗಿದ ಮರಗಳು ಅಪಾಯ ಆಹ್ವಾನಿಸುವಂತಿದ್ದರೂ ಸಂಬಂಧಪಟ್ಟ ಇಲಾಖೆಗಳು ತೆರವು ಮಾಡಲು ಮುಂದಾಗಿಲ್ಲ. ಇದರಿಂದ ಪ್ರಯಾಣಿಕರು ನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಪ್ರಸ್ತುತ ಮಳೆಗಾಲವಾಗಿದ್ದು, ಸದೃಢವಾಗಿರುವ ಮರಗಳೇ ಗಾಳಿ ಬಂದಾಗ ನೆಲಕ್ಕುರುಳುತ್ತಿವೆ. ಇಂತಹ ಸಂದರ್ಭದಲ್ಲಿ ರಾಮನಗರ ಸೇರಿ ಪ್ರಮುಖ ಗ್ರಾಮೀಣ ರಸ್ತೆ ಇಕ್ಕೆಲಗಳಲ್ಲಿ ಬೃಹತ್ ಗಾತ್ರದ ಮರಗಳು ಒಣಗಿನಿಂತಿದ್ದು, ಮಳೆ&ಗಾಳಿ ಸಂದರ್ಭದಲ್ಲಿ ಅಪಾಯ ಗ್ಯಾರಂಟಿ ಎಂಬಂತಿವೆ.
ರಾಮನಗರ&ಕನಕಪುರ ರಸ್ತೆ, ಬನ್ನಿಕುಪ್ಪೆ, ರಾಮನಗರ - ಚನ್ನಪಟ್ಟಣ ಹೆದ್ದಾರಿ, ಹುಣಸನಹಳ್ಳಿ, ಜಾಲಮಂಗಲ, ಮಾಗಡಿ, ರಾಮನಗರದ ರೈಲ್ವೆ ನಿಲ್ದಾಣ ಎದುರಿನ ರಸ್ತೆ, ಎಪಿಎಂಸಿ ಮುಂಭಾಗ, ಚನ್ನಮಾನಹಳ್ಳಿ ಸಮೀಪ, ಅಚ್ಚಲು ರಸ್ತೆ ಸೇರಿ ಹಲವು ಕಡೆಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡಿದಂತೆ ದೊಡ್ಡ ದೊಡ್ಡ ಮರಗಳೇ ಒಣಗಿವೆ.
ಈ ಹಿಂದೆ ಅನೇಕ ಬಾರಿ ಒಣಗಿದ ಮರಗಳು ಬಿದ್ದು ಸಾರ್ವಜನಿಕರಿಗೆ ತೊಂದರೆ ಉಂಟಾದ ನಿರ್ದಶನಗಳಿವೆ. ಹೀಗಿದ್ದರೂ ಸಂಬಂಧಪಟ್ಟ ಇಲಾಖೆಗಳು ಕಂಡು ಕಾಣದಂತೆ ಮೌನವಹಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ರಸ್ತೆ ವಿಸ್ತೀರ್ಣ ನೆಪದಲ್ಲಿ ಹಸಿರಾಗಿರುವ ಮರಕ್ಕೆ ಕೊಡಲಿ ಪೆಟ್ಟು ನೀಡಲು ಮುಂದಾಗುವ ನಗರಸಭೆ, ಗ್ರಾಪಂ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಗಳು ಅಪಾಯ ತಂದೊಡ್ಡುವ ಒಣಗಿದ ಮರ ತೆರವು ಮಾಡಲು ಮೀನಮೇಷ ಏಣಿಸುತ್ತಿರುವುದೇಕೆ?, ಜಿಲ್ಲಾಡಳಿತ ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ದೇಶನ ನೀಡಿ ಕೂಡಲೇ ಒಣ ಮರ ತೆರವು ಗೊಳಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಾಹಿತಿ ನೀಡಿಲು ನಿರ್ಲಕ್ಷ್ಯ
ಒಣಗಿದ ಮರ ಕಂಡ ಕೂಡಲೇ ವ್ಯಾಪ್ತಿಗೆ ಸಂಬಂಧಪಟ್ಟ ನಗರಸಭೆ ಅಥವಾ ಗ್ರಾಪಂಗಳು, ಲೋಕೋಪಯೋಗಿ ಇಲಾಖೆಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಆದರೆ, ಸ್ಥಳಿಯ ಸಂಸ್ಥೆಗಳು, ಇಲಾಖೆಗಳಿಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿಲ್ಲ. ಮಾಹಿತಿ ನೀಡಿದರೆ ಸೂಕ್ತ ಕ್ರಮ ವಹಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತದೆ. ಅರಣ್ಯ ಇಲಾಖೆ ಮರ ತೆರವು ಪ್ರಕ್ರಿಯೆಗೆ ಹರಾಜು ಮೂಲಕ ನಡೆಸಬೇಕು. ಆದರೆ, ಒಣ ಮರ ಹರಾಜು ಪ್ರಕ್ರಿಯೆಯಲ್ಲಿ ಯಾರೂ ಭಾಗವಹಿಸುವುದಿಲ್ಲ. ಈ ಕಾರಣದಿಂದ ಅರಣ್ಯ ಇಲಾಖೆ ಮರ ತೆರವು ಕಾರ್ಯಾಚರಣೆಯಲ್ಲಿ ಹಿನ್ನಡೆ ಅನುಭವಿಸಿ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇಲೆ ತೆರವು ಕಾರ್ಯ ನಡೆಸಬೇಕಿದೆ ಎನ್ನುತ್ತದೆ ಅರಣ್ಯ ಇಲಾಖೆ ಮೂಲ.
ಗ್ರಾಪಂ, ನಗರಸಭೆ ಅಥವಾ ಲೋಕೋಪಯೋಗಿ ಇಲಾಖೆಗಳಿಂದ ಯಾವುದೇ ಮಾಹಿತಿ ಬಂದಿಲ್ಲ. ಸಮಸ್ಯೆ ಕಂಡು ಬಂದರೆ ಸಾರ್ವಜನಿಕ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಒಣ ಮರ ಪರಿಶೀಲನೆ ನಡೆಸಿ ಅಪಾಯ ತರುವ ಮರಗಳನ್ನು ತೆರವುಗೊಳಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇಲಾಖೆ ಮುಂದಿನ ಕ್ರಮ ಕೈಗೊಳ್ಳುತ್ತದೆ.
ಮಹಮ್ಮದ್ ಮನ್ಸೂರ್, ವಲಯ ಅರಣ್ಯಾಧಿಕಾರಿ
ಹಸಿರಾದ ಮರಗಳೇ ಮಳೆ ಗಾಳಿ ಸಮಯದಲ್ಲಿ ನೆಳಕ್ಕುರುಳುತ್ತಿದೆ. ಅಂತಹ ಸಂಧರ್ಭದಲ್ಲಿ ಒಣಮರ ಎಲ್ಲಿರುತ್ತದೆಯೋ ಅಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಎಲ್ಲಿ ಮರ ಬೀಳುತ್ತದೆಯೋ ಎಂಬ ಚಿಂತೆಯಲ್ಲಿ ರಸ್ತೆಯಲ್ಲಿ ಓಡಾಟ ನಡೆಸಬೇಕು. ಸಂಬಂಧಪಟ್ಟ ಗ್ರಾಪಂ, ನಗರಸಭೆ, ಲೋಕೋಪಯೋಗಿ ಇಲಾಖೆಗಳು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ, ಪ್ರಯೋಜನಕ್ಕೆ ಬಾರದ ಒಣಗಿದ ಮರ ತೆರವು ಮಾಡಲು ಅಗತ್ಯ ಕ್ರಮ ಕೈಗೊಂಡು ಅಪಾಯ ತಪ್ಪಿಸಬೇಕು.
ಜಿ.ಪಿ. ಗಿರೀಶ್ ವಾಸು, ಗ್ರಾಪಂ ಸದಸ್ಯ, ಗೌಡಯ್ಯನದೊಡ್ಡಿ.