ಒಳಮೀಸಲಾತಿಗಾಗಿ ದಲಿತರ ಪಟ್ಟು

ಗೌರಿಬಿದನೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಒಳಮೀಸಲಾತಿ ಕುರಿತ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡ ಎ.ಗಂಗಾಧರಪ್ಪ, ಮುಖಂಡರಾದ ಸನಂದಕುಮಾರ್, ಎಂ.ಗಂಗಾಧರಪ್ಪ, ನಾರಾಯಣಪ್ಪ, ವಕೀಲ ನರಸಿಂಹಮೂರ್ತಿ, ಆದೀಶ್, ಬಾಲಯ್ಯ, ಎನ್.ಗಂಗಾಧರಪ್ಪ, ಮಂಜುನಾಥ ಇತರರು ಭಾಗವಹಿಸಿದ್ದರು.
2
ಗೌರಿಬಿದನೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಒಳಮೀಸಲಾತಿ ಕುರಿತ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡ ಎ.ಗಂಗಾಧರಪ್ಪ, ಮುಖಂಡರಾದ ಸನಂದಕುಮಾರ್, ಎಂ.ಗಂಗಾಧರಪ್ಪ, ನಾರಾಯಣಪ್ಪ, ವಕೀಲ ನರಸಿಂಹಮೂರ್ತಿ, ಆದೀಶ್, ಬಾಲಯ್ಯ, ಎನ್.ಗಂಗಾಧರಪ್ಪ, ಮಂಜುನಾಥ ಇತರರು ಭಾಗವಹಿಸಿದ್ದರು.
Published on

16ಕ್ಕೆ ಡಿಸಿ ಕಚೇರಿ ಎದುರು ಸಾಂಕೇತಿಕ ಧರಣಿ ದಲಿತ ಮುಖಂಡ ಎ.ಗಂಗಾಧರಪ್ಪ ಮಾಹಿತಿ


ಗೌರಿಬಿದನೂರು : ಒಳಮೀಸಲು ಜಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅ.16ರಂದು ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಎ.ಗಂಗಾಧರಪ್ಪ ಹೇಳಿದರು.
ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಒಳಮೀಸಲಾತಿ ಜಾರಿ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅ.16ರಂದು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ದಲಿತ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ಹಮ್ಮಿಕೊಂಡಿರುವ ಧರಣಿಯಲ್ಲಿ ತಾಲೂಕಿನಿಂದ 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಚನ್ನಪ್ಪ ಮಾತನಾಡಿ, ತಾಲೂಕಿನಾದ್ಯಂತ ಪ್ರತಿ ಹಳ್ಳಿಗೂ ಮುಖಂಡರು ಭೇಟಿ ನೀಡಿ ಕಾರ್ಯಕರ್ತರಲ್ಲಿ ಅರಿವು ಮೂಡಿಸಲಿದ್ದಾರೆ. ಕಾರ್ಯಕ್ರಮದ ಪ್ರಚಾರಕ್ಕಾಗಿ ಹೋಬಳಿಗೆ ಒಂದರಂತೆ ಆಟೋ ವ್ಯವಸ್ಥೆ ಮಾಡಲಾಗುವುದು. ಆಯಾಯ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಂಬಂಧಪಟ್ಟ ಹೋಬಳಿ, ಗ್ರಾಮಗಳಲ್ಲಿ ಸಮುದಾಯದ ಜನರಲ್ಲಿ ಅರಿವು ಮೂಡಿಸಬೇಕು. ಅ.16ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿ ಬಳಿಕ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಗೆ ತೆರಳಲಾಗುವುದು ಎಂದು ತಿಳಿಸಿದರು.
ಕೆಎಸ್‌ಎಸ್ಡಿ ಜಿಲ್ಲಾ ಉಪಾಧ್ಯಕ್ಷ ಎಂ.ಆರ್.ಸತ್ಯನಾರಾಯಣ ಮಾತನಾಡಿ, ಒಳಮೀಸಲು ಜಾರಿ ಮಾಡಲು ಆಯಾಯ ರಾಜ್ಯಗಳಿಗೆ ಅಧಿಕಾರವಿದೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿರುವುದು ಸ್ವಾಗತಾರ್ಹ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೆ ಮೀನಮೇಷ ಎಣಿಸುತ್ತಿದ್ದಾರೆ. ಹಾಗಾಗಿ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ. ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು. ಮುಖಂಡರಾದ ಸನಂದಕುಮಾರ್, ಎಂ.ಗಂಗಾಧರಪ್ಪ, ನಾರಾಯಣಪ್ಪ, ವಕೀಲ ನರಸಿಂಹಮೂರ್ತಿ, ಆದೀಶ್, ಬಾಲಯ್ಯ, ಎನ್.ಗಂಗಾಧರಪ್ಪ, ಮಂಜುನಾಥ, ಅಶ್ವತ್ಥ್, ವೆಂಕಟೇಶ್, ನಾರಾಯಣಸ್ವಾಮಿ, ಗಂಗಾಧರಪ್ಪ, ರಮೇಶ್, ಬಾಬು, ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net