ದಲಿತರಿಗೆ ದೇವಾಲಯ ಪ್ರವೇಶ ನಿರಾಕರಣೆ?

Published on

ಎರಡು ಗುಂಪುಗಳ ನಡುವೆ ಗಲಾಟೆ | ಶಾಂತಿಸಭೆ ವಿಫಲ | ಪೊಲೀಸ್ ಠಾಣೆಯಲ್ಲಿ ದೂರು


ಕನಕಪುರ : ತಾಲೂಕಿನ ಕಸಬಾ ಹೋಬಳಿ ಕೂನೂರು ಗ್ರಾಮದಲ್ಲಿ ಬಸವೇಶ್ವರ ಹಾಗೂ ಮಾರಮ್ಮ ದೇವಿಯ ದೇವಾಲಯಗಳಿಗೆ ಪರಿಶಿಷ್ಟ ಜನರಿಗೆ ಪ್ರವೇಶ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಶಾಂತಿಸಭೆ ವಿಫಲವಾಗಿ, ಗದ್ದಲ-ಗಲಾಟೆಯ ನಡುವೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಕಳೆದ ವಾರ ಕೂನೂರು ಗ್ರಾಮದಲ್ಲಿ ದೇವಾಲಯ ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ಗಲಾಟೆ ನಡೆದಿತ್ತು. ಆಗ ತಾಲೂಕು, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಶಾಂತಿಸಭೆ ನಡೆಸಿ ಜಾಗೃತಿ ಮೂಡಿಸಿದ್ದರು. ಆದರೂ ದೇವಾಲಯಗಳಿಗೆ ದಲಿತರು ಪ್ರವೇಶಿಸಲಾಗದೆ ಅಧಿಕಾರಿಗಳು ವಾಪಸ್ ಆಗಿ ಶಾಂತಿಸಭೆ ನಡೆಸಲು ತೀರ್ಮಾನಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಂಜುನಾಥ್ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಲ್.ಕೃಷ್ಣರ ನೇತೃತ್ವದಲ್ಲಿ ಗುರುವಾರ ತಾಲೂಕು ಕಚೇರಿಯಲ್ಲಿ ಕರೆಯಲಾಗಿತ್ತು. ಸಭೆ ಪ್ರಾರಂಭವಾಗುತ್ತಿದ್ದಂತೆ ಪರ-ವಿರೋಧದ ಚರ್ಚೆ ನಡೆದವು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ದೇಗುಲ ಪ್ರವೇಶ ಮಾಡುವ ಹಕ್ಕಿದೆ. ಯಾರೂ ಮೂಢನಂಬಿಕೆ, ಅಸ್ಪೃಶ್ಯತೆ ಆಚರಣೆ ಮಾಡಬಾರದು ಎಂದು ತಿಳಿವಳಿಕೆ ನೀಡಿದರು.
ತಲತಲಾಂತರದಿಂದ ನಡೆದುಬಂದಿರುವ ಪದ್ಧತಿಯನ್ನೇ ಅನುಸರಿಸಬೇಕೇ ವಿನಃ ಬೇರೆಬೇರೆ ಸಂಪ್ರದಾಯಗಳು ಗ್ರಾಮದಲ್ಲಿ ನಡೆಯುವುದು ಬೇಡವೆಂಬ ಅಭಿಪ್ರಾಯವನ್ನು ಮೇಲ್ವರ್ಗದ ಕೆಲ ಮುಖಂಡರು ವ್ಯಕ್ತಪಡಿಸಿದರು. ಈ ಮಧ್ಯೆ ಪರ-ವಿರೋಧ ಚರ್ಚೆಯ ನಡುವೆ ಮೇಲ್ವರ್ಗದ ಮುಖಂಡರು ಸಭೆಯಿಂದ ಹೊರನಡೆದರು.

ಕೂನೂರು ಗ್ರಾಮದಲ್ಲಿ ಪರಿಶಿಷ್ಟರಿಗೆ ಈ ಹಿಂದಿನಿಂದಲೂ ದೇವಾಲಯಕ್ಕೆ ಪ್ರವೇಶವಿರಲಿಲ್ಲ. 15 ವರ್ಷಗಳ ಹಿಂದೆ ಜಾತ್ರೆ ಸಂದರ್ಭದಲ್ಲಿ ದಲಿತ ಜನಾಂಗದ ಯುವಕನೊಬ್ಬ ನೂಕುನುಗ್ಗಲಿನಲ್ಲಿ ಆಯತಪ್ಪಿ ಮೆರವಣಿಗೆಯ ದೇವರನ್ನು ಸ್ಪರ್ಶಿಸಿದ ಎಂದು ಹಲ್ಲೆ ಮಾಡಲಾಗಿತ್ತು. ನಂತರ ಪ್ರತಿವರ್ಷದ ಜಾತ್ರೆಯಲ್ಲೂ ಪೂಜೆ-ಪುನಸ್ಕಾರಗಳಿಗೆ ನಿಬರ್ಂಧ ಹೇರಲಾಗಿತ್ತು. ದಲಿತರು ಕಾಡಿಬೇಡಿ ದೇವರ ಪೂಜೆಗೆ ಸಾಮಗ್ರಿ ನೀಡಿ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಮುಖಂಡರಾದ ಪ್ರಶಾಂತ್, ಶಿವಲಿಂಗಯ್ಯ ಹಲವರು ವಿವರಿಸಿದರು. ನಗರ ಠಾಣೆಗೆ ದೂರು: ತಾಲೂಕು ಕಚೇರಿ ಬಳಿ ನಡೆದ ಜಾತಿಸಂಘರ್ಷದ ಬಗ್ಗೆ ದಲಿತ ಮುಖಂಡ ಶ್ರೀನಿವಾಸಮೂರ್ತಿ ನಗರ ಠಾಣೆಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ತಾಲೂಕು ಕಚೇರಿ ಎದುರೇ ಜಾತಿಸಂಘರ್ಷ
ತಾಲೂಕು ತಹಸೀಲ್ದಾರ್ ಮಂಜುನಾಥ್, ಅಧಿಕಾರಿಗಳು ಮತ್ತು ಎರಡು ಸಮುದಾಯದ ಮುಖಂಡರ ಸಂಧಾನಸಭೆ ಅಪೂರ್ಣಗೊಂಡು ತಾಲೂಕು ಕಚೇರಿ ಬಾಗಿಲ ಬಳಿ ಹೊರಬರುತ್ತಿದ್ದ ವೇಳೆ ಜಾತಿ ಸಂಘರ್ಷದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತು. ಪರಿಸ್ಥಿತಿ ಅರಿತ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನಪಡಿಸಿ ಅಲ್ಲಿಂದ ತೆರಳುವಂತೆ ಮಾಡಿದರು. ಇದರಿಂದ ಕುಪಿತಗೊಂಡ ದಲಿತ ಮುಖಂಡರಾದ ಶ್ರೀನಿವಾಸಮೂರ್ತಿ, ಮುನಿಯಪ್ಪ, ಮಾದೇಶ್, ರಾಮು, ಪ್ರದೀಪ್ ಹಲವರು ತಾಲೂಕು ಕಚೇರಿ ಎದುರೇ ಜಾತಿಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಊರಿನ ಮುಖ್ಯಸ್ಥರಾದ ಶಿವಣ್ಣ, ರಘು ಅರಸ್, ಗಾಡ್‌ರಾಜು, ನಾಗರಾಜು ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net