ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

29Kush001
Published on

ಕುಶಾಲನಗರ: ಕುಶಾಲನಗರದಲ್ಲಿ ಈ ಹಿಂದೆ ನಡೆಯುತ್ತಿದ್ದ ಮಾರುಕಟ್ಟೆಯಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.


ಹಳೇ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಜಮಾಯಿಸಿದ ಸಂಘದ ಸದಸ್ಯರು, ಈಗಿರುವ ಆರ್‌ಎಂಸಿಯಿಂದ ಹಳೇ ಮಾರುಕಟ್ಟೆಗೆ ಸಂತೆಯನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದರು.


ಈ ಹಿಂದೆ ಇದ್ದ ಸಂತೆ ಮಾರುಕಟ್ಟೆಯಿಂದ ದೊರೆಯುತ್ತಿದ್ದ ಲಕ್ಷಾಂತರ ರೂ. ಆದಾಯ ಪುರಸಭೆಗೆ ತಪ್ಪಿದೆ. ಪ್ರಸಕ್ತ ಸಂತೆ ನಡೆಯುತ್ತಿರುವ ಆರ್‌ಎಂಸಿ ಪ್ರಾಂಗಣ ರೈತರಿಗಾಗಿ ಇದ್ದು, ವ್ಯಾಪಾರಿಗಳ ಅನುಕೂಲಕ್ಕೆ ಹಳೇ ಮಾರುಕಟ್ಟೆಗೆ ಸಂತೆ ಸ್ಥಳಾಂತರಗೊಳಿಸಬೇಕಿದೆ. ಹೆದ್ದಾರಿ ಬದಿಯಲ್ಲಿರುವ ಆರ್‌ಎಂಸಿಯಲ್ಲಿ ವಾರದ ಸಂತೆ ದಿನ ಹೆಚ್ಚಿನ ವಾಹನ ದಟ್ಟಣೆಯಿಂದ ತೀವ್ರ ಅನನುಕೂಲ ಸೃಷ್ಟಿಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ. ಇದೆಲ್ಲವನ್ನು ಪರಿಗಣಿಸಿ ಸಂತೆ ಸ್ಥಳಾಂತರಕ್ಕೆ ಕ್ರಮ ವಹಿಸಬೇಕಿದೆ ಎಂದು ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಇಕ್ಬಾಲ್ ಒತ್ತಾಯಿಸಿದರು.


ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಡಿಎಸ್‌ಎಸ್ ಸಂಚಾಲಕ ಕೆ.ಬಿ.ರಾಜು, ಮಾರುಕಟ್ಟೆ ಸಂಘದ ಕಾರ್ಯದರ್ಶಿ ಮಹೇಶ್, ಖಜಾಂಚಿ ವಿ.ಎಚ್.ಪ್ರಶಾಂತ್, ಡಿ.ಸಿ.ಮೂರ್ತಿ, ವಿ.ಎನ್.ಪ್ರಸಾದ್, ಡಿ.ಆರ್.ಪರಮೇಶ್, ಗಣೇಶ್, ಡಿಎಸ್‌ಎಸ್ ಪ್ರಮುಖರಾದ ಮಂಜುನಾಥ್, ಮಹೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net