ದಲಿತರಿಗೆ ಮೀಸಲಿಟ್ಟಿದ್ದ ಹಣ ಲೂಟಿ

Published on

ಸಕಲೇಶಪುರ: ದಲಿತರಿಗೆ ಮೀಸಲಿಟ್ಟಿದ್ದ ಹಣ ಲೂಟಿ ಮಾಡಿ ಸರ್ಕಾರ ನಡೆಸಲಾಗುತ್ತಿದೆ ಎಂದು ವಿರೋಧ ಪಕ್ಷಈ ನಾಯಕ ಆರ್.ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.


ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಕೊಲ್ಲಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 75ರ ತಡೆಗೋಡೆ ಕುಸಿತ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಜಾತಿಯವರು ಭ್ರಷ್ಟಾಚಾರ ಮಾಡಬಹುದು ಎಂದು ಕಾನೂನು ತಿದ್ದುಪಡಿ ಮಾಡಿ ಬಿಡಲಿ ಆಗ ನಾವು ಪ್ರಶ್ನಿಸುವುದಿಲ್ಲ. ಪ್ರಶ್ನಿಸಿದರೆ ಜಾತಿ ಹುಡುಕುತ್ತಾರೆ. ಸಂವಿಧಾನದಲ್ಲಿ ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು ಎಂದು ಕಾನೂನು ರೂಪಿಸಲಾಗಿದೆ. ಈ ಸರ್ಕಾರ ಇದನ್ನು ತಿದ್ದುಪಡಿ ಮಾಡಿ ಈ ಜಾತಿಯವರು ತಪ್ಪು ಮಾಡಬಹುದು ಎಂದು ಕಾನೂನು ಮಾಡಲಿ. ಸರ್ಕಾರ ಒಂದು ರೀತಿ ಕೋಮಾ ಹಂತದಲ್ಲಿದೆ. ನಿಮಗೆ ಯಾವ್ಯಾವ ಜಾತಿ ಬೇಕು, ಸಂವಿಧಾನ ಬದಲಾವಣೆ ಮಾಡಿ ಬಿಡೋಣ. ಇಂತಹ ಜಾತಿಯವರು ಲೂಟಿ ಹೊಡೆದರೆ, ಅಕ್ರಮ ಮಾಡಿದರೆ, ಕಳ್ಳತನ ಮಾಡಿದರೆ ಯಾವುದೇ ಕ್ರಮ ತೆಗೆದುಕೊಳ್ಳುವ ಹಾಗಿಲ್ಲ ಎಂದು ಕಾನೂನು ಮಾಡಿಬಿಡಿ. ಈ ಜಾತಿಯವನು ಕಳ್ಳತನ ಮಾಡಬಹುದು, ಆ ಜಾತಿಯವನು ಕಳ್ಳತನ ಮಾಡಬಾರದು ಎಂದು ಸಂವಿಧಾನದಲ್ಲಿ ಇದೆಯಾ? ಎಂದು ಪ್ರಶ್ನಿಸಿದರು.


ವಾಲ್ಮೀಕಿ ಹಗರಣದಲ್ಲಿ ಪ್ರಮುಖ ಆರೋಪಿಗಳ ಹೆಸರು ಡೆತ್‌ನೋಟ್‌ನಲ್ಲಿ ಇದ್ದರೂ ಸದನದಲ್ಲಿ ಡೆತ್‌ನೋಟ್ ಓದುವಾಗ ಶಾಸಕರ ಹೆಸರು ಬಿಟ್ಟು ಓದುತ್ತಾರೆ. ಇದನ್ನು ನಾವು ಸದನದಲ್ಲಿ ಧ್ವನಿ ಎತ್ತಿದರೆ ನಮ್ಮ ಬಗ್ಗೆ ಇಲ್ಲ ಸಲ್ಲದನ್ನು ಹೇಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವಾಗ ಡೆತ್‌ನೋಟ್ ಓದಿದರೂ ಅದರಲ್ಲಿ ಸಚಿವರು, ಎಂಎಲ್ಎ, ವಾಲ್ಮೀಕಿ ನಿಗಮದ ಅಧ್ಯಕ್ಷರ ಹೆಸರನ್ನು ಬಿಟ್ಟು ಓದುತ್ತಾರೆ ಎಂದರು.


ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ವಿಧಾನಸಭೆಯಲ್ಲಿ ಮಾತನಾಡಲು ಬಿಡುತ್ತಿಲ್ಲ ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಆರ್.ಅಶೋಕ್, ಜನರಿಗೆ ತಪ್ಪು ಮಾಹಿತಿ ಹೋಗಬಾರದು. ಸಿಎಂ ಅವರು ಹಗರಣದಲ್ಲಿ ಭಾಗಿಯಾಗಿಲ್ಲ. ಅಧಿಕಾರಿಗಳೇ ಎಲ್ಲ ತಿಂದು ಹಾಕಿದ್ದಾರೆ ಅಂತ ಹೇಳಿದ್ದಾರೆ. 187 ಕೋಟಿ ರೂ. ಅಧಿಕಾರಿಗಳೇ ತಿನ್ನಲು ಆಗುತ್ತಾ? ಅದರ ಹಿಂದೆ ದೊಡ್ಡ ತಿಮಿಂಗಿಲಗಳೇ ಇರುವುದರಿಂದ ತಿಂದಿದ್ದಾರೆ. ಅಧಿಕಾರಿಗಳು ಅಲ್ಲಿ ಇಲ್ಲಿ ಬಿದ್ದಿದ್ದನ್ನು ತಿಂದಿದ್ದಾರೆ ಅಷ್ಟೇ ಎಂದರು.


ಈ ಸರ್ಕಾರ ಪಾಪರ್ ಆಗಿದ್ದು, ಅವರ ಬಳಿ ಹಣವಿಲ್ಲ. ಅಂದಾಜು ವೆಚ್ಚ ತಯಾರಿಸದೆ ಗ್ಯಾರಂಟಿ ಯೋಜನೆ ತಂದಿದ್ದಾರೆ. ಅದಕ್ಕೆ ಈಗ ದಲಿತರ ಹಣ ಹುಡುಕುತ್ತಿದ್ದಾರೆ. ಒಕ್ಕಲಿಗರ ನಿಗಮ, ಬ್ರಾಹ್ಮಣರು, ಲಿಂಗಾಯತರ ನಿಗಮದ ಹಣವಿದೆ. ಎಲ್ಲವನ್ನೂ ಬಳಸಿಕೊಳ್ಳಿ. ಇಲ್ಲವಾದರೆ ನಿಮ್ಮ ಬಾಳು ಬೀದಿಗೆ ಬರುತ್ತದೆ ಎಂದು ನಾನೇ ಹೇಳಿದ್ದೇನೆ. ಈ ಸರ್ಕಾರ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಹೊರಗಡೆ ಬರಲು ಆಗುತ್ತಿಲ್ಲ. ದಾರಿ ಕಾಣದಾಗಿದೆ. ವಾಲ್ಮೀಕಿ ಹಗರಣ, ಮುಡಾದಲ್ಲೂ ದಲಿತರ ಹಣವೇ ಲೂಟಿಯಾಗಿದೆ. ದಲಿತರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ಸರ್ಕಾರ ಮಾಡಿದೆ. ರಾಜ್ಯ ಸರ್ಕಾರಕ್ಕೆ ಮರ್ಯಾದೆ ಇಲ್ಲ, ತಪ್ಪಿಸಿಕೊಳ್ಳುವ ದಾರಿ ಇಲ್ಲ. ಬಿಜೆಪಿ ಅವಧಿಯವರು ಭ್ರಷ್ಟಾಚಾರ ಮಾಡಿದ್ದಾರೆಂದು 21 ಆರೋಪಪಟ್ಟಿ ಮಾಡಿದ್ದಾರೆ. ನಾನು 78 ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net