ಪ್ರಿಯತಮನೊಂದಿಗೆ ಪರಾರಿಯಾದ್ದಾಕೆ ವಾಪಸ್

ಮನಬದಲಿಸಿ ಗಂಡನ ಮನೆ ಸೇರಿದರು
love
love
Published on: 

ಕಾಸರಗೋಡು: ಅನ್ಯಮತೀಯ ಪ್ರಿಯತಮನೊಂದಿಗೆ ಪರಾರಿಯಾಗಿದ್ದ ಶಿಕ್ಷಕಿ, ನ್ಯಾಯಾಲಯದಲ್ಲಿ ತನ್ನ ತನ್ನ ನಿಲುವು ಬದಲಾಯಿಸಿ ಪತಿ, ಮಕ್ಕಳೊಂದಿಗೆ ಮನೆಗೆ ತೆರಳಿದ್ದಾಳೆ. ಪ್ರಿಯಕರ ಸಮದ್ ಕೂಡಾ ತನ್ನ ಕುಟುಂಬದವರೊಂದಿಗೆ ತೆರಳಿದ್ದಾನೆ.

ಮೊಯ್ಲೋತ್ತರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ಅನುಮೋಳ್ ಹತ್ತು ದಿನಗಳ ಹಿಂದೆ ಶಾಲೆಗೆಂದು ತೆರಳಿದವಳು ನಾಪತ್ತೆಯಾಗಿದ್ದಳು. ಈಕೆ ವಡಗರ ತೋಡನ್ನೂರ್ ನಿವಾಸಿ ಸಮದ್ ಎಂಬಾತನ ಜತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಶಿಕ್ಷಕಿ ನಾಪತ್ತೆಯಾಗಿರುವ ಬಗ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿತ್ತು. ಕಲ್ಲಾಚಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ, ತಮ್ಮ ಕುಟುಂಬದವರೊಂದಿಗೆ ತೆರಳಲು ಇಬ್ಬರೂ ಸಮ್ಮತಿಸಿದ ಹಿನ್ನೆಲೆಯಲ್ಲಿ ಅವರ ಇಚ್ಛಾನುಸಾರ ಕಳುಹಿಸಿಕೊಡಲಾಗಿದೆ.

ಈಕೆ ತನ್ನ ಇಬ್ಬರು ಎಳೆಯ ಮಕ್ಕಳನ್ನು ಬಿಟ್ಟು ಪ್ರಿಯತಮನ ಜತೆ ಪರಾರಿಯಾಗಿರುವುದರಿಂದ ಜುವೈನಲ್ ಜಸ್ಟಿಸ್ ಆ್ಯಕ್ಟ್ ಪ್ರಕಾರ ಕೇಸು ದಾಖಲಾದಲ್ಲಿ ಇವರಿಬ್ಬರು ಜೈಲುಪಾಲಾಗುವುದಲ್ಲದೆ, ಶಿಕ್ಷಕಿ ಸರ್ಕಾರಿ ಕೆಲಸವನ್ನೂ ಕಳೆದುಹೋಗುವ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕಿ ತನ್ನ ನಿಲುವು ಬದಲಾಯಿಸಿದ್ದಾಳೆ.

ಪತಿ ನೀಡಿದ್ದ ಲಿವರ್‌ನಿಂದ ಬದುಕಿದ್ದಾಕೆ

ವಿಪರ್ಯಾಸವೆಂದರೆ, ಹತ್ತು ವರ್ಷದ ಹಿಂದೆ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಅನುಮೋಳ್‌ಗೆ ತನ್ನ ಲಿವರ್ ನೀಡಿ ಬದುಕಿಸಿದ್ದು ಪತಿ ಸುಭಾಷ್. ಆ ಸಂದರ್ಭ ಅನೇಕ ಸಾರ್ವಜನಿಕರು ಆರ್ಥಿಕವಾಗಿ ಚಿಕಿತ್ಸೆಗೆ ಸಹಾಯ ಮಾಡಿದ್ದರು. ಎಳೆಯ ಮಕ್ಕಳು ಹಾಗೂ ಜೀವದಾನ ಮಾಡಿದ್ದ ಪತಿಯನ್ನು ಬಿಟ್ಟು ಪರಾರಿಯಾಗಿದ್ದ ಶಿಕ್ಷಕಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net