ಕುಂಬಳೆ ಮೊಗ್ರಾಲ್‌ನಲ್ಲಿ ಕಾಡುಹಂದಿ ಬೈಕ್‌ಗೆ ಡಿಕ್ಕಿ

ಸವಾರ ಗಂಭೀರ
ACCIDENT
ACCIDENT
Published on: 

ಕಾಸರಗೋಡು: ಕುಂಬಳೆ ಸಮೀಪದ ಮೊಗ್ರಾಲ್‌ನಲ್ಲಿ ರಸ್ತೆಗೆ ಅಡ್ಡ ಬಂದ ಕಾಡುಹಂದಿ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್ ಪಲ್ಟಿಯಾಗಿ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೊಗ್ರಾಲ್ ಕಡವತ್ ನಿವಾಸಿ ಅಬ್ದುಲ್ ಕರೀಂ ಬಿ.ವಿ. (40) ಗಾಯಗೊಂಡವರು. ಅವರು ಬಾಡೂರು ಮಣಿಯಂಪಾರೆ ಬದ್ರಿಯಾ ಮಂಜಿಲ್‌ನ ಅಬ್ದುಲ್ ರಜಾಕ್ ಕೆ.ಎಂ. (32) ಚಲಾಯಿಸುತ್ತಿದ್ದ ಬೈಕ್‌ನ ಹಿಂಬದಿ ಸವಾರರಾಗಿದ್ದರು. ಬೈಕ್ ಎಜೆ ನಗರ ತಲುಪಿದಾಗ ಅಡ್ಡ ಬಂದ ಕಾಡುಹಂದಿ ಡಿಕ್ಕಿಯಾದ ಪರಿಣಾಮ ಬೈಕ್ ಮಗುಚಿ ಬಿದ್ದಿತ್ತು. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಭಂಡಾರ ಮೆರವಣಿಗೆ ಸಿದ್ಧತೆ ಮಧ್ಯೆ ದೈವಪಾತ್ರಿ ಕುಸಿದುಬಿದ್ದು ಮೃತ್ಯು

ಕಾಸರಗೋಡು: ದೈವಾರಾಧನೆಯ ಅಂಗವಾಗಿ ಭಂಡಾರ ಮೆರವಣಿಗೆ ಸಿದ್ಧತೆ ನಡೆಯುತ್ತಿದ್ದ ವೇಳೆ ದೈವಪಾತ್ರಿಯೊಬ್ಬರು ಕುಸಿದುಬಿದ್ದು ತಪಟ್ಟಿದ್ದಾರೆ.

ಬದಿಯಡ್ಕ ಸಮೀಪದ ಪೈಕ ನೆಕ್ರಾಜೆ ಪ್ಲಾವಿಂಡಡಿ ನಿವಾಸಿ ಗಂಗಾಧರ (60) ಮೃತ. ಪೈಕ ಬಳಿಯ ಬಾಲನಡ್ಕದಲ್ಲಿ ವ್ಯಾಪಾರಿಯಾಗಿದ್ದ ಅವರು, ತಾಯತ್ತ್ವೀಡ್ ತರವಾಡಿನ ಸದಸ್ಯ ಹಾಗೂ ಶ್ರೀ ವಿಫ್ಣಿುಮೂರ್ತಿ ದೈವದ ದರ್ಶನ ಪಾತ್ರಿಯಾಗಿದ್ದರು.

ಪೈಕ ಬಳಿಯ ತರವಾಡೊಂದರಲ್ಲಿ ಭಾನುವಾರ ವಿವಿಧ ದೈವ ಮಹೋತ್ಸವ ಆರಂಭಗೊಂಡಿತ್ತು. ಇದರ ಅಂಗವಾಗಿ ಸಂಜೆ ತಾಯತ್ತ್ವೀಡು ತರವಾಡಿನಿಂದ ಮತ್ತೊಂದು ತರವಾಡಿಗೆ ದೈವಗಳ ಭಂಡಾರ ಕೊಂಡೊಯ್ಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತರವಾಡಿನಲ್ಲಿ ಪೂಜೆ ನಡೆದು ಭಂಡಾರ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದ್ದಂತೆ ಗಂಗಾಧರ ಅಸೌಖ್ಯಗೊಂಡು ಕುಸಿದುಬಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ.

ಸಂಬಂಧಿಕ ರತೀಶ್ ಪಿ.ಸಿ. ನೀಡಿದ ದೂರಿನನ್ವಯ ಬದಿಯಡ್ಕ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಗಾಧರ ಅವರು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ನೆಲ್ಲಿಕಟ್ಟೆ ಟಕದ ಸದಸ್ಯರಾಗಿದ್ದರು.

ಮದ್ಯದ ನಶೆಯಲ್ಲಿ ಜೀಪ್ ಚಲಾವಣೆ

ಕಾಸರಗೋಡು: ನಗರದ ಪ್ರೆಸ್‌ಕ್ಲಬ್ ಜಂಕ್ಷನ್ ಸನಿಹ ಥಾರ್ ಜೀಪ್ ಮತ್ತು ಕಾರು ಡಿಕ್ಕಿಯಾಗಿ ವಾಹನಗಳಿಗೆ ಹಾನಿಯುಂಟಾಗಿದೆ. ಥಾರ್ ವಾಹನ ಚಾಲಕ ಉದುಮ ನಿವಾಸಿ ಸಜಿತ್ ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಥಾರ್ ವಾಹನ ಪಳ್ಳಿಕೆರೆ ಪಳ್ಳಿಪುಳ ನಿವಾಸಿಯಾದ ಪಿ.ನಸೀರಾ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.