ಕರಾವಳಿಗೆ ವಂದೇ ಭಾರತ್ ನಿರಾಶೆ!

ಕರಾವಳಿಗೆ ವಂದೇ ಭಾರತ್ ರೈಲು ನೀಡುವ ಕೇಂದ್ರ ರೈಲ್ವೆ
ಕರಾವಳಿಗೆ ವಂದೇ ಭಾರತ್ ರೈಲು ನೀಡುವ ಕೇಂದ್ರ ರೈಲ್ವೆ
Published on
ಮಂಗಳೂರು: ಯಶವಂತಪುರ-ಮಡಗಾಂವ್ ನಡುವಿನ ಬಹು ನಿರೀಕ್ಷಿತ ವಂದೇ ಭಾರತ್ ರೈಲು ಮೂಡಿದ್ದ ನಿರೀಕ್ಷೆ ಕರಾವಳಿಗರಿಗೆ ನಿರಾಸೆಯಾಗಿ ಮಾರ್ಪಟ್ಟಿವೆ. ಈ ರೈಲು ಸಂಚಾರದಲ್ಲಿ ಮಂಗಳೂರು, ಉಡುಪಿ, ಕಾರವಾರದಲ್ಲಿ ನಿಲುಗಡೆ ನೀಡದಿರುವ ಬಗ್ಗೆ ಕರಾವಳಿಗರಿಂದ ಆಕ್ರೋಷ ವ್ಯಕ್ತವಾಗಿದೆ.
ವಂದೇ ಭಾರತ್ ರೈಲು ಸೇವೆ ಬಗ್ಗೆ ಕಳೆದ ಫೆ.9ರಂದು ದಕ್ಷಿಣ ಪಶ್ಚಿಮ ರೈಲ್ವೆಯು ಹೊರಡಿಸಿದ ತಾತ್ಕಾಲಿಕ ವೇಳಾಪಟ್ಟಿಯಂತೆ ರೈಲು ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಟು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ ಮಾರ್ಗವಾಗಿ ಪಡೀಲ್ ಹಾಗೂ ತೋಕೂರು ಮೂಲಕ ಸಂಜೆ 7.15ಕ್ಕೆ ಮಡಗಾಂವ್ ತಲುಪಲಿದೆ. ಮರಳಿ ಮಡಗಾಂವ್‌ನಿಂದ ಬೆಳಗ್ಗೆ 5.30ಕ್ಕೆ ಹೊರಟು ಸಂಜೆ 6.40ಕ್ಕೆ ಯಶವಂತಪುರ ತಲುಪುವಂತೆ ಯೋಜಿಸಲಾಗಿದೆ. ಆದರೆ ಈ ವೇಳಾಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಬ್ರಹ್ಮಣ್ಯ ರಸ್ತೆ ನಿಲ್ದಾಣಕ್ಕೆ ಮಾತ್ರ ನಿಲುಗಡೆ ಸೂಚಿಸಲಾಗಿದೆ. ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್ ನಿಲ್ದಾಣಗಳಲ್ಲಿ ಯಾವುದೇ ನಿಲುಗಡೆ ಇಲ್ಲ. ಪಡೀಲ್ ಮೂಲಕ ರೈಲು ಹಾದುಹೋಗಲಿದೆ. ಮಾತ್ರವಲ್ಲದೆ ಮುಂದೆ ಉಡುಪಿ, ಕಾರವಾರದಲ್ಲೂ ನಿಲುಗಡೆ ಇಲ್ಲ!. ಬೆಂಗಳೂರು ಮಂಗಳೂರು ನಡುವಿನ ವೇಗ ರೈಲು ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದ್ದು, ಸಕಲೇಶ್‌ಪುರ ಘಾಟ್ ವಿಭಾಗದ ವಿದ್ಯುದೀಕರಣ ಪೂರ್ಣಗೊಂಡ ನಂತರ ನಿರೀಕ್ಷೆಗಳು ಮತ್ತಷ್ಟು ಗಟ್ಟಿಯಾಗಿದ್ದವು. ಆದರೆ ಇದೀಗ ಪ್ರಕಟವಾದ ಪ್ರಸ್ತಾವನೆಯಲ್ಲಿ ಕೇವಲ ಬೆಂಗಳೂರು ಗೋವಾ ಸಂಪರ್ಕಕ್ಕೆ ಮಾತ್ರ ಆದ್ಯತೆ ನೀಡಿರುವುದು ಕರಾವಳಿಗರಲ್ಲಿ ನಿರಾಸೆ ಮೂಡಿಸಿದೆ.

ಪ್ರಯೋಗಾತ್ಮಕ ಸಂಚಾರ ಮಾತ್ರ- ಅಂತಿಮ ಅಲ್ಲ

ರೈಲ್ವೆ ನೋಟಿಫಿಕೇಶನ್ ನಲ್ಲಿ ಹಾಸನ-ತೋಕೂರು ನಡುವೆ ವಿದ್ಯುದೀಕರಣ ಪೂರ್ಣಗೊಂಡಿರುವುದಾಗಿ ಉಲ್ಲೇಖಿಸಿ, ಸರಾಸರಿ ವೇಗವನ್ನು ಹೆಚ್ಚಿಸುವ ಮೂಲಕ ಪ್ರಯಾಣ ಸಮಯ ಕಡಿಮೆ ಮಾಡುವ ಕುರಿತು ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಈ ಸೇವೆಗೆ ಎರಡು ವಂದೇ ಭಾರತ್ ರೇಕ್‌ಗಳನ್ನು ನಿಯೋಜಿಸುವ ಅಗತ್ಯವಿರುವುದೂ ದಾಖಲಾಗಿದೆ. ಈಗ ಇರುವುದು ಕೇವಲ ಪ್ರಯೋಗಾತ್ಮಕ ಸಂಚಾರ ಮಾತ್ರ, ಅಂತಿಮ ವೇಳಾಪಟ್ಟಿಗೆ ಮುನ್ನ ಪ್ರಯೋಗಾತ್ಮಕ ಸಂಚಾರದ ಸಾಧಕ ಭಾದಕಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ರೈಲ್ವೆ ತಿಳಿಸಿದೆ.

ರೈಲುಗಳ ಸಂಚಾರ ಸಮಯಕ್ಕೂ ವ್ಯತ್ಯಯ

ಯಶವಂತಪುರ-ಮಡಗಾಂವ್ ವಂದೇಭಾರತ್ ಪ್ರಸ್ತಾವಿತ ವೇಳಾಪಟ್ಟಿಯಿಂದ ಪ್ರಸ್ತುತ ಇರುವ ಬೆಂಗಳೂರು ಕರಾವಳಿ ರೈಲುಗಳ ಸಂಚಾರ ಸಮಯಕ್ಕೂ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ವೇಳೆಯ ಕ್ರಾಸಿಂಗ್ ಸಮಸ್ಯೆಗಳು ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ನಿತ್ಯ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ವೇಳಾಪಟ್ಟಿ ಪ್ರಕಟಿಸುವ ಮುನ್ನ ರೈಲ್ವೆ ಇಲಾಖೆ ಸ್ಥಳೀಯ ಜನಪ್ರತಿನಿಧಿಗಳು, ಹೋರಾಟಗಾರರು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಕರಾವಳಿಗೆ ಪ್ರತ್ಯೇಕ ವಂದೇ ಭಾರತ್‌ಗೆ ಬೇಡಿಕೆ

ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಅವರು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಬೆಂಗಳೂರು ಮಂಗಳೂರು ವಂದೇ ಭಾರತ್ ನೀಡುವುದಾಗಿ ಹೇಳಿ ಈಗ ಗೋವಾಕ್ಕೆ ಸೇವೆ ನೀಡುವುದು ನಮಗೆ ಉಪಯೋಗವಿಲ್ಲ. ಈಬಗ್ಗೆ ನಮ್ಮ ವಿರೋಧವೂ ಇಲ್ಲ. ಆದರೆ ಒಂದು ರೈಲು ನಮ್ಮ ಜಿಲ್ಲೆಯಲ್ಲಿ ಹಾದುಹೋಗುವುದರಿಂದ ಮಾತ್ರ ಪ್ರಯೋಜನ ಆಗುವುದಿಲ್ಲ. ಮಂಗಳೂರು ಜಿಲ್ಲೆ ಕೇಂದ್ರವಾಗಿದ್ದು ಇಲ್ಲಿ ನಿಲ್ದಾಣ ನೀಡಬೇಕು. ಉಡುಪಿ, ಕಾರವಾರಗಳಿಗೂ ಅವಕಾಶ ಕೊಡಬೇಕು. ಈ ನಿಟ್ಟಿನಲ್ಲಿ ಉಡುಪಿ-ಮಂಗಳೂರು-ಬೆಂಗಳೂರಿಗೆ ಪ್ರತ್ಯೇಕ ವಂದೇ ಭಾರತ್ ರೈಲು ಸಂಚಾರ ನಮ್ಮ ಬೇಡಿಕೆ ಎಂದು ತಿಳಿಸಿದ್ದಾರೆ.
"

ಕರಾವಳಿಗೆ ವಂದೇ ಭಾರತ್ ರೈಲು ನೀಡುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಭರವಸೆ ಹೀಡೇರಿದೆ. ಪ್ರಸ್ತುತ ಇರುವುದು ಪ್ರಯೋಗಾತ್ಮಕ ಸಂಚಾರ ಮಾತ್ರ, ಈಬಗ್ಗೆ ಯಾವುದೇ ಗೊಂದಲ ಬೇಡ, ಸಾಧಕ ಭಾದಕ ಪರಿಶೀಲಿಸಿ ಅಂತಿಮ ವೇಳಾಪಟ್ಟಿ ಮಾಡುವಾಗ ಜಿಲ್ಲಾ ಕೆಂದ್ರಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net