ಮಾದಕವಸ್ತು ಮಾರಾಟ ಇಬ್ಬರ ಸೆರೆ - 6.75 ಲಕ್ಷ ರೂ. ಮೌಲ್ಯದ ಸೊತ್ತು ವಶ - ಸಿಸಿಬಿ ಪೊಲೀಸರ ಕಾರ್ಯಾಚರಣೆ

 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನಿಷೇದಿತ ಮಾದಕ ವಸ್ತು ಎಂಡಿಎಂಎ ನ್ನು ಖರೀದಿಸಿಕೊಂಡು ಮಂಗಳೂರು ನಗರದ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಅವರಿಂದ 24.57 ಗ್ರಾಂ ತೂಕದ ಎಂಡಿಎಂಎ ಸಹಿತ ಒಟ್ಟು 6.75 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಬಂದರು ಮತ್ತು ದಕ್ಕೆಯ ಪರಿಸರದಲ್ಲಿ ನ.4ರಂದು ಆಟೋ ರಿಕ್ಷಾದಲ್ಲಿ ಇಟ್ಟುಕೊಂಡು ಮಾದಕವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ಆಟೋ ಚಾಲಕ ಅಡ್ಯಾರ್ ಕಣ್ಣೂರುನ ದಯಾಂಬು ಎಚ್.ಎಸ್.ನಗರದ ಅಬ್ದುಲ್ ಸಲಾಮ್ (39) ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ 1,20,000 ರೂ. ಮೌಲ್ಯದ ಎಂಡಿಎಂಎ, ಆಟೋ ರಿಕ್ಷಾ, ಮೊಬೈಲ್ ಪೋನ್, ತೂಕಮಾಪನ, ಖಾಲಿ ಜಿಪ್ ಲಾಕ್ ಕವರ್ ಸಹಿತ ಒಟ್ಟು 2,30,500 ರೂ.ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನ.6ರಂದು ಬೋಳಿಯಾರು ಪರಿಸರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು, ಬೋಳಿಯಾರ್ ಜಾರದಗುಡ್ಡೆ ನಿವಾಸಿ ಮೊಹಮ್ಮದ್ ನಾಸೀರ್ ಯಾನೆ ಶಾಕೀರ್ ಚಾಕಿ (28) ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ 1,20,000 ರೂ. ಮೌಲ್ಯದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ, ಕಪ್ಪು ಬಣ್ಣದ ಯಮಹಾ ಕಂಪೆನಿಯ ಯಮಹಾ ಬೈಕ್, ಮೊಬೈಲ್ ಪೋನ್, ಖಾಲಿ ಜಿಪ್ ಲಾಕ್ ಕವರ, ಸಹಿತ ಒಟ್ಟು 2,05,000 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಮಾದಕವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net