ಗರ್ಭಪಾತ ನಂತರದ ತಾಯಿ ಮರಣ ಶೂನ್ಯ ಲೇಡಿಗೋಷನ್‌ಗೆ ರಾಜ್ಯ ಮಟ್ಟದ ಪ್ರಶಸ್ತಿ

ಗರ್ಭಪಾತ ನಂತರದ ತಾಯಿ ಮರಣ ಶೂನ್ಯ ಲೇಡಿಗೋಷನ್‌ಗೆ ರಾಜ್ಯ ಮಟ್ಟದ ಪ್ರಶಸ್ತಿ
Published on: 

ಮಂಗಳೂರು: ತಾಯಿ, ಮಗುವಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುತ್ತಿರುವ ಲೇಡಿಗೋಷನ್ ಆಸ್ಪತ್ರೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ಪ್ರಶಸ್ತಿಗೆ ಆಯ್ಕೆಯಾಗಿದೆ.

ಅನೇಕ ವಿನೂತನ ಕಾರ್ಯಕ್ರಮ ಹಾಗೂ ವಿಧಾನಗಳನ್ನು ಅಳವಡಿಸಿಕೊಂಡು ತಾಯಿಮರಣ ಹಾಗೂ ಶಿಶು ಮರಣದ ಪ್ರಮಾಣವನ್ನು ಕನಿಷ್ಠತೆಗೆ ತಂದ ಹೆಗ್ಗಳಿಕೆ ಲೇಡಿಗೋಷನ್ ಆಸ್ಪತ್ರೆಯದ್ದಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಐಪಾಸ್ ಫೌಂಡೇಶನ್ ಇದರ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ಜಿಲ್ಲಾಸ್ಪತ್ರೆಗಳ ಪೈಕಿ ಲೇಡಿಗೋಷನ್ ಆಸ್ಪತ್ರೆಯಲ್ಲಿ 2025-26 ರಲ್ಲಿ ಕಾನೂನುಬದ್ಧವಾಗಿ ನಡೆದ ಗರ್ಭಪಾತ ಮತ್ತು ಅದರ ನಂತರದ ಆರೈಕೆಯಲ್ಲಿ ಶೇಕಡಾ ನೂರರಷ್ಟು ತಾಯಿ ಆರೋಗ್ಯವನ್ನು ಕಾಪಾಡಿ ತಾಯಿ ಮರಣವನ್ನು ಶೂನ್ಯಕ್ಕೆ ತಂದಂತಹ ಕೀರ್ತಿಗೆ ಪಾತ್ರವಾಗಿ ರಾಜ್ಯಕ್ಕೆ ಮೊದಲನೇ ಸ್ಥಾನದಲ್ಲಿರುತ್ತದೆ. ಅಂಕಿ ಅಂಶಗಳ ಪ್ರಕಾರ ಸದ್ರಿ ಆರ್ಥಿಕ ವರ್ಷದಲ್ಲಿ 304 ಕಾನೂನು ಮಿತಿಯ ಗರ್ಭಪಾತಗಳನ್ನು ಲೇಡಿಗೋಷನ್ ಆಸ್ಪತ್ರೆ ಸಮರ್ಥವಾಗಿ ನಿಭಾಯಿಸಿದ್ದು, ಪ್ರತಿಯೊಂದು ಪ್ರಕರಣವೂ ಗುಣಮಟ್ಟದ ಕಾಂಪ್ರೆಹೆನ್ಸಿವ್ ಅಬಾರ್ಶನ್ ಕೇರ್ ಕಾರ್ಯಕ್ರಮದಡಿಯಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಿ ಝೀರೋ ಮರಣ ಪ್ರಮಾಣವನ್ನು ದಾಖಲಿಸಿದೆ.

2025-26 ನೇ ಸಾಲಿನ ಅಂಕಿ ಅಂಶಗಳು

9 ವಾರಗಳ ಮೊದಲ ಗರ್ಭಪಾತ -191, 10 ರಿಂದ 12ವಾರಗಳು-31, 12 ರಿಂದ 20 ವಾರಗಳು-52, 20 ರಿಂದ 24 ವಾರಗಳು-25, 24 ವಾರಗಳ ನಂತರ-5,ಒಟ್ಟು -304.

ಅಲ್ಲದೆ ಶೇ.95 ರಷ್ಟು ಫಲಾನುಭವಿಗಳಿಗೆ ಕುಟುಂಬ ಕಲ್ಯಾಣ ವಿಧಾನಗಳ ಅಳವಡಿಕೆಯನ್ನು ಪ್ರೆರೇಪಿಸಿ ಅನುಸರಣೆ ಮಾಡುವಂತೆ ಮಾಡಿದ ಹಿರಿಮೆಗೆ ಕೂಡಾ ಲೇಡಿಗೋಷನ್ ಆಸ್ಪತ್ರೆ ಒಳಗಾಗಿದೆ. ಇಂಥಹ ಅಪೂರ್ವ ಸಾಧನೆಯನ್ನು ಮಾಡಿ ಕರ್ನಾಟಕ ರಾಜ್ಯದಲ್ಲಿ ಗರ್ಭಪಾತಾನಂತರದ ತಾಯಿ ಆರೋಗ್ಯ ಕ್ಷೇತ್ರದಲ್ಲಿಯ ಗುಣ ಮಟ್ಟದ ಸೇವೆಗಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುವ ಪ್ರಶಸ್ತಿಗೆ ಲೇಡಿಗೋಷನ್ ಆಸ್ಪತ್ರೆ ಪಾತ್ರವಾಗಿದೆ.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಈ ಬಗ್ಗೆ ಮಾಹಿತಿ ನೀಡಿ, ಗುರುತರವಾದ ಈ ಯಶಸ್ಸಿಗೆ ಕಾರಣೀಕರ್ತರಾದ ಕೆ.ಎಂ.ಸಿ.ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಅರಿವಳಿಕೆ ವಿಭಾಗ, ರೇಡಿಯೋಡಯೋಗ್ನೋಸಿಸ್ ವಿಭಾಗ ಮತ್ತು ನವಜಾತ ಶಿಶು ವಿಭಾಗದ ಪಾತ್ರ ಮಹತ್ತರ. ಅಲ್ಲದೆ ಶುಶ್ರೂಷಕ ವೃಂದ, ಅರೆ ವೈದ್ಯಕೀಯ ಸಿಬ್ಬಂದಿಗಳು, ತಾಂತ್ರಿಕ ವರ್ಗದವರ ಸೇವೆ ಅನನ್ಯ. ಲೇಡಿಗೋಷನ್ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿಕೊಂಡಿರುವ ವ್ಯಾಟ್ಸಪ್ ಹೈರಿಸ್ಕ್ ಪ್ರೆಗ್ನೆನ್ಸಿ ಟ್ರ್ಯಾಕಿಂಗ್ ಸಿಸ್ಟಮ್, ಪ್ರಸೂತಿ ತೀವ್ರ ನಿಗಾ ಘಟಕ, ಪ್ರಸೂತಿ ಕ್ರಿಟಿಕಲ್ ಕೇರ್ ಘಟಕ, ಹೈ ರಿಸ್ಕ್ ಪ್ರೆಗ್ನೆನ್ಸಿ ಡೆಲಿವರಿ ಘಟಕ ಇವೆಲ್ಲವೂಗಳೂ ಪೂರಕವಾದ ವ್ಯವಸ್ಥೆಗಳಾಗಿ ತಾಯಿ ಮರಣದ ದರವನ್ನು ಶೂನ್ಯವಾಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ ಎಂದರು.