

ಮಂಗಳೂರು: ಬಿ.ಸಿ.ರೋಡ್‌ನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಜುಲೈ 29 ರಂದು ಸಂವಿಧಾನಬದ್ಧ ಹಾಗೂ ಶಾಂತಿಯುತವಾಗಿ ಆಯೋಜಿಸಲಾಗಿದ್ದ ಗುರುಪೂರ್ಣಿಮಾ ಮಹೋತ್ಸವದ ವಿರುದ್ಧ ಸುಳ್ಳು ಮತ್ತು ಪ್ರಚೋದನಕಾರಿ ಆರೋಪಗಳನ್ನು ಮಾಡಿರುವ ಎಸ್‌ಡಿಪಿಐ ಮುಖಂಡ ಅಶ್ರಫ್ ತಲಪಾಡಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.
ಹಿಂದೂ ಜನಜಾಗೃತಿ ಸಮಿತಿಯು ಕಳೆದ 24 ವರ್ಷಗಳಿಂದ ಸಂವಿಧಾನದ ಚೌಕಟ್ಟಿನೊಳಗೆ ಧರ್ಮ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿದೆ. ಭಾರತೀಯ ಸಂವಿಧಾನದನ್ವಯ ಧರ್ಮ, ಸಂಸ್ಕೃತಿ ಹಾಗೂ ಹಿಂದೂ ರಾಷ್ಟ್ರದ ಪರಿಕಲ್ಪನೆಯ ಕುರಿತು ಶಾಂತಿಯುತವಾಗಿ ವಿಚಾರ ಮಂಡಿಸಲು ಪ್ರತಿಯೊಬ್ಬ ನಾಗರಿಕನಿಗೂ ಹಕ್ಕಿದೆ. ಧಾರ್ಮಿಕ ಕಾರ್ಯಕ್ರಮವನ್ನು ಉದ್ದೇಶಪೂರ್ವಕವಾಗಿ ದೇಶದ್ರೋಹಿ ಎಂದು ಬಿಂಬಿಸಿ ಅಪಪ್ರಚಾರ ನಡೆಸಿದವರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಹಾಗೂ ಮುಂಬರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕ ವಿಜಯ್ ಕುಮಾರ್ ಆಗ್ರಹಿಸಿದ್ದಾರೆ.