ಕರಾವಳಿಯಲ್ಲಿ ಮಳೆ ಇಳಿಮುಖ

ಕರಾವಳಿ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮುಂಗಾರು ಮಳೆಯ ಅಬ್ಬರದಲ್ಲಿ ಕೊಂಚ ಇಳಿಮುಖ ಕಂಡುಬಂದಿದೆ.
ಕರಾವಳಿ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮುಂಗಾರು ಮಳೆಯ ಅಬ್ಬರದಲ್ಲಿ ಕೊಂಚ ಇಳಿಮುಖ ಕಂಡುಬಂದಿದೆ.
Published on

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮುಂಗಾರು ಮಳೆಯ ಅಬ್ಬರದಲ್ಲಿ ಕೊಂಚ ಇಳಿಮುಖ ಕಂಡುಬಂದಿದೆ.

ಶುಕ್ರವಾರ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಸೇರಿದಂತೆ ಉಭಯ ಜಿಲ್ಲೆಗಳಲ್ಲಿ ದಿನದ ಬಹುತೇಕ ಭಾಗ ಮೋಡಮುಸುಕಿದ ವಾತಾವರಣವಿತ್ತು. ಸಂಜೆ ವೇಳೆಗೆ ಅಲ್ಲಲ್ಲಿ ಗುಡುಗು ಹಾಗೂ ಬಲವಾದ ಗಾಳಿ ಸಹಿತ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಯಲ್ಲೋ ಅಲರ್ಟ್ ಘೋಷಿಸಿದೆ.
ಪಶ್ಚಿಮ ಘಟ್ಟದ ಕೆಳಭಾಗದ ಸೂಕ್ಷ್ಮ ಪ್ರದೇಶಗಳಾದ ಚಾರ್ಮಾಡಿ, ಶಿರಾಡಿ ಹಾಗೂ ಆಗುಂಬೆ ಘಾಟಿ ಸುತ್ತಮುತ್ತ ಶನಿವಾರ ರಾತ್ರಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಇದರೊಂದಿಗೆ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಗಾಳಿಯ ವೇಗವು ಗಂಟೆಗೆ 35 ರಿಂದ 40 ಕಿಮೀ ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದ್ದು, ಮೀನುಗಾರರು ಅಪಾಯಕಾರಿ ಪ್ರದೇಶಗಳಿಗೆ ಇಳಿಯದಂತೆ ಮತ್ತು ಕಡಲತೀರದ ನಿವಾಸಿಗಳು ಜಾಗರೂಕರಾಗಿರಲು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಶುಕ್ರವಾರ ಕರಾವಳಿಯಲ್ಲಿ ಸರಾಸರಿ ಗರಿಷ್ಠ 32.1ಡಿ.ಸೆ ಹಾಗೂ ಕನಿಷ್ಠ 24.7ಡಿ.ಸೆ ತಾಪಮಾನ ದಾಖಲಾಗಿದೆ.ಶುಕ್ರವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 42.3 ಮಿ.ಮೀ ಮಳೆ ದಾಖಲಾಗಿದೆ. ಬೆಳ್ತಂಗಡಿ 43.5 ಮಿ.ಮೀ, ಬಂಟ್ವಾಳ 47.1 ಮಿ.ಮೀ, ಮಂಗಳೂರಿನಲ್ಲಿ 20.0 ಮಿಮಿ, ಪುತ್ತೂರು 38.8 ಮಿ.ಮೀ, ಸುಳ್ಯದಲ್ಲಿ 54.6 ಮಿ.ಮೀ., ಮೂಡುಬಿದಿರೆ 43.3 ಮಿ.ಮೀ, ಕಡಬದಲ್ಲಿ 36.3 ಮಿಮಿ, ಮೂಲ್ಕಿ 9.5 ಮಿ.ಮೀ. ಉಳ್ಳಾಲದಲ್ಲಿ 66.1 ಮಿಮಿ ಮಳೆ ವರದಿಯಾಗಿದೆ. ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟ ನೇತ್ರಾವತಿ ನದಿ (ಬಂಟ್ವಾಳ) 6.190 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 27.00 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 79.625 ಮೀ, ಗುರುಪುರ ನದಿ (ಅಡ್ಡೂರು) 2.60 ಮೀ ನೀರಿದೆ.
*ಚಂಡಮಾರುತ ಶಿಥಿಲ-ಮಳೆ ಪ್ರಭಾವ ಕ್ಷೀಣ
ಕರಾವಳಿ ಕರ್ನಾಟಕ ಬಾಗದಲ್ಲಿ ಮಳೆ ತಗ್ಗಲು ಕಡಲ ವಲಯದ ಜಾಗತಿಕ ವಾತಾವರಣದ ಬದಲಾವಣೆಯೇ ಮುಖ್ಯ ಕಾರಣವಾಗಿದೆ. ದಕ್ಷಿಣ ಜಪಾನ್ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬೃಹತ್ ಚಂಡಮಾರುತವು ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಮುಂಗಾರು ಮಾರುತಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಪ್ರಸ್ತುತ ಸಕ್ರಿಯವಾಗಿರುವ ಈ ಚಂಡಮಾರುತವು ಆಗಸ್ಟ್ 13ರ ವೇಳೆಗೆ ಶಿಥಿಲಗೊಳ್ಳುವ ನಿರೀಕ್ಷೆಯಿದೆ. ತದನಂತರ ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಪ್ರಕ್ರಿಯೆಗಳು ಸಂಪೂರ್ಣವಾಗಿ ದುರ್ಬಲಗೊಳ್ಳಲಿದ್ದು, ಕರಾವಳಿಯುದ್ದಕ್ಕೂ ಮಳೆಯ ಪ್ರಭಾವ ಕ್ಷೀಣಿಸಲಿದೆ.
ಆಗಸ್ಟ್ 9ರಿಂದ ಮಳೆಯ ಆರ್ಭಟ ಕಡಿಮೆಯಾಗಿ ಬಿಡುವಿನ ವಾತಾವರಣ ಹೆಚ್ಚಾಗುವ ಲಕ್ಷಣಗಳಿವೆ. ಇದು ನಿರಂತರ ಮಳೆಯಿಂದ ಕಂಗಾಲಾಗಿದ್ದ ಕೃಷಿಕರು ಹಾಗೂ ತೋಟಗಾರರಿಗೆ ದೊಡ್ಡ ರಿಲೀಫ್ ನೀಡಲಿದೆ. ಆಗಸ್ಟ್ 10ರಿಂದ ಕೃಷಿ ಅಡಿಕೆ, ತೆಂಗು ಹಾಗೂ ಇತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಸೂಕ್ತ ಸಮಯ ಸಿಗಲಿದೆ. ಮುಂದಿನ ಒಂದು ವಾರದ ಬಳಿಕ ಧರೆಗಿಳಿಯುವ ಮಳೆ ಸಂಪೂರ್ಣ ಶಾಂತವಾಗಲಿದ್ದು, ಸಾರ್ವಜನಿಕರು ಹಾಗೂ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net