ಮಕ್ಕಳ ಕಳ್ಳರ ವದಂತಿಗೆ ಆತಂಕಪಟ್ಟ ಜನ ತೆರೆ ಎಳೆದ ಪೊಲೀಸರು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನಗರದ ಕುಂಟಿಕಾನ ಪರಿಸರದಿಂದ 5 ವರ್ಷದ ಮಗುವನ್ನು ಓಮ್ನಿಯಲ್ಲಿ ಬಂದ ತಂಡ ಕದ್ದೊಯ್ದಿದೆ ಎನ್ನುವ ವದಂತಿಯ ಸಂದೇಶ ಶುಕ್ರವಾರ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು ಭಯಗೊಂಡರು. ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ ಇದೊಂದು ವದಂತಿ ಎನ್ನುವುದು ಸ್ಪಷ್ಟವಾಗಿದೆ.
ಯಾರೋ ಮಕ್ಕಳಿಂದ ವಿಷಯ ತಿಳಿದ ಸ್ಥಳೀಯ ಮಹಿಳೆಯೊಬ್ಬರು ಈ ಬಗ್ಗೆ ಆಡಿಯೋ ಮೆಸೇಜನ್ನು ಪರಿಸರದ ಅಂಗನವಾಡಿ ಟೀಚರಿಗೆ ಹಾಕಿದ್ದರು. ಇದನ್ನು ನಂಬಿದ ಟೀಚರ್ ಮಕ್ಕಳ ಪೋಷಕರಿದ್ದ ಗ್ರೂಪಿಗೆ ವಾಯ್ಸ ಮೆಸೇಜ್ ಹಾಕಿ, ಯಾರೋ ಮಕ್ಕಳು ಕಳ್ಳರಿದ್ದಾರಂತೆ, ಜಾಗ್ರತೆ ಇರುವಂತೆ ಹೇಳಿದ್ದರು. ಈ ಎರಡೂ ವಾಯ್ಸ ಮೆಸೇಜ್ ಭಾರೀ ವೈರಲ್ ಆಗಿದ್ದು ಕುಂಟಿಕಾನದಲ್ಲಿ ಮಕ್ಕಳು ಕಳ್ಳರಿದ್ದಾರೆಂದು ಸಂದೇಶ ಜನರಿಗೆ ಹೋಗಿತ್ತು. ಜನರು ಇದನ್ನು ಹೌದೋ ಅಲ್ಲವೋ ಎಂದು ಪರಿಶೀಲಿಸುವ ಮೊದಲು ಭಯಕ್ಕೆ ಒಳಗಾಗಿದ್ದರು.
ವಿಷಯ ತಿಳಿದ ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದು ಮಧ್ಯಾಹ್ನವರೆಗೂ ಸ್ಥಳೀಯ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅಂಗನವಾಡಿ ಟೀಚರನ್ನೂ ಮಾಹಿತಿ ಕೇಳಿದ್ದಾರೆ. ಯಾರೋ ಪೋಷಕರು ಹಾಕಿದ್ದಕ್ಕೆ ಜಾಗ್ರತೆ ಇರುವಂತೆ ಮೆಸೇಜ್ ಹಾಕಿದ್ದೆ ಎಂದು ಟೀಚರ್ ತಿಳಿಸಿದ್ದಾರೆ. ಬೆಳಗ್ಗೆ ಸೈಂಟ್ ಆನ್ಸ್ ಶಾಲೆಯ ಬಳಿ ಮಗುವೊಂದು ಆಟೋದಲ್ಲಿ ಕುಳಿತು ಅಳುತ್ತಿರುವುದನ್ನು ನೋಡಿದ ಮಕ್ಕಳು ಒಬ್ಬರಿಗೊಬ್ಬರು ಹೇಳುತ್ತಾ ‘ಮಕ್ಕಳ ಕಳ್ಳರು ಬಂದಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ. ಅದೇ ಮಾತು ಮುಂದೆ ವದಂತಿಗೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಈ ಬಗ್ಗೆ ಯಾರಿಂದಲೂ ದೂರು ಬಂದಿಲ್ಲ. ಆದರೂ ವಾಯ್ಸ ಮೆಸೇಜ್ ಗಮನಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಲವರ ಜತೆ ಮಾಹಿತಿ ಕೇಳಿ ಪರಿಶೀಲನೆ ನಡೆಸಿದ್ದಾರೆ. ಯಾರಿಂದಲೂ ಸ್ಪಷ್ಟ ಉತ್ತರ ಬಂದಿಲ್ಲ. ಬಳಿಕ ಅದೊಂದು ವದಂತಿ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net