ಮಂಗಳೂರಿನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಯಶಸ್ವಿ

ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಕಟ್ಟುನಿಟ್ಟಿನ ತಪಾಸಣೆಯ ನಡುವೆ ಪರೀಕ್ಷೆ ಯಶಸ್ವಿಯಾಗಿ ನೆರವೇರಿತು.
ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಕಟ್ಟುನಿಟ್ಟಿನ ತಪಾಸಣೆಯ ನಡುವೆ ಪರೀಕ್ಷೆ ಯಶಸ್ವಿಯಾಗಿ ನೆರವೇರಿತು.
Published on

ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಭಾನುವಾರ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಯು ಮಂಗಳೂರು ನಗರದಲ್ಲಿ ಅತ್ಯಂತ ಪ್ರಶಾಂತ, ಸುಸೂತ್ರ ಹಾಗೂ ಪಾರದರ್ಶಕವಾಗಿ ನಡೆದಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 9 ಪ್ರಮುಖ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಕಟ್ಟುನಿಟ್ಟಿನ ತಪಾಸಣೆಯ ನಡುವೆ ಪರೀಕ್ಷೆ ಯಶಸ್ವಿಯಾಗಿ ನೆರವೇರಿದ್ದು, ಶೇಕಡಾ 85.72 ರಷ್ಟು ಹಾಜರಾತಿ ದಾಖಲಾಗಿದೆ.
3,448 ಅಭ್ಯರ್ಥಿಗಳು ಭಾಗಿ - 574 ಗೈರು
ನಗರದ 9 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಾಗಿ ಒಟ್ಟು 4,022 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 3,448 ಅಭ್ಯರ್ಥಿಗಳು ಉತ್ಸಾಹದಿಂದ ಪರೀಕ್ಷೆಗೆ ಹಾಜರಾಗಿದ್ದು, 574 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಕೊಡಿಯಾಲ್‌ಬೈಲ್‌ನ ಸೆಂಟ್ ಅಲೋಶಿಯಸ್ ಕಾಲೇಜು, ಬೆಂದೂರ್‌ನ ಸೆಂಟ್ ಆಗ್ನೆಸ್ ಕಾಲೇಜು, ಬಲ್ಮಠದ ಸರ್ಕಾರಿ ಕಾಲೇಜು, ಎಂ.ಜಿ. ರಸ್ತೆಯ ಕೆನರಾ ಕಾಲೇಜು, ಕಾರ್‌ಸ್ಟ್ರೀಟ್‌ನ ಸರ್ಕಾರಿ ಕಾಲೇಜು, ಮಿಲಾಗ್ರಿಸ್ ಕಾಲೇಜು, ಗಾಂಧಿನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಕುದ್ರೋಳಿಯ ಶ್ರೀ ನಾರಾಯಣಗುರು ಕಾಲೇಜು ಹಾಗೂ ಮೇರಿಹಿಲ್‌ನ ವಿಕಾಸ್ ಕಾಲೇಜುಗಳಲ್ಲಿ ಪರೀಕ್ಷೆಗಳು ಯಶಸ್ವಿಯಾಗಿ ಜರುಗಿದವು.
ಅಧಿಕಾರಿಗಳಿಂದ ಕ್ಷಣಕ್ಷಣದ ಮೇಲ್ವಿಚಾರಣೆ
ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಅಥವಾ ಅಕ್ರಮಗಳು ನಡೆಯದಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಹಾಗೂ ಮಂಗಳೂರು ನಗರ ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಹೆಚ್.ಎನ್. ಅವರು ಕ್ಷಣಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು. ಪ್ರಾಧಿಕಾರ ಹೊರಡಿಸಿದ ಕಠಿಣ ಮಾರ್ಗದರ್ಶಿ ಸೂಚಿಗಳ ಪ್ರಕಾರ, ಪರೀಕ್ಷೆ ಆರಂಭವಾಗುವ ಕನಿಷ್ಠ 2.30 ಗಂಟೆಗಳ ಮುಂಚಿತವಾಗಿಯೇ ಅಭ್ಯರ್ಥಿಗಳು ಕೇಂದ್ರಕ್ಕೆ ಆಗಮಿಸಿದ್ದರು. ಅಭ್ಯರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಸಂಪೂರ್ಣ ಶೋಧನೆಗೆ ಒಳಪಡಿಸಿದ ನಂತರವೇ ಪರೀಕ್ಷಾ ಹಾಲ್‌ನೊಳಗೆ ಪ್ರವೇಶಿಸಲು ಅನುಮತಿಸಲಾಯಿತು. ಮೊಬೈಲ್, ಬ್ಲೂಟೂತ್ ಸೇರಿದಂತೆ ಎಲ್ಲಾ ಮಾದರಿಯ ಎಲೆಕ್ಟ್ರಾನಿಕ್ ಸಾಧನಗಳು, ಪುಸ್ತಕಗಳು, ಚೀಟಿಗಳು, ಜ್ಯಾಮಿಟ್ರಿ ಬಾಕ್ಸ್, ಕ್ಯಾಲ್ಕುಲೇಟರ್, ಸ್ಕೇಲ್, ಬ್ಯಾಗ್, ಪರ್ಸ್, ನೀರಿನ ಬಾಟಲಿ ಹಾಗೂ ತೆರೆದ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಶೂ, ಬೂಟ್, ಕ್ಯಾಪ್, ಜೀನ್ಸ್ ಪ್ಯಾಂಟ್ ಹಾಗೂ ಹೆಚ್ಚು ಜೇಬುಗಳಿರುವ ಉಡುಪುಗಳಿಗೆ ಅವಕಾಶವಿರಲಿಲ್ಲ. ಜನಿವಾರ, ತಾಳಿ, ಕಾಲುಂಗುರ, ಇತರ ಆಭರಣಗಳು ಹಾಗೂ ಧಾರ್ಮಿಕ ಉಡುಪುಗಳನ್ನು ಧರಿಸಲು ಅವಕಾಶ ನೀಡಲಾಗಿತ್ತಾದರೂ, ಅವುಗಳನ್ನು ವಿಶೇಷ ಭದ್ರತಾ ತಪಾಸಣೆಗೆ ಒಳಪಡಿಸಿದ ನಂತರವೇ ಬಿಡಲಾಯಿತು.
--------------
ರೈಲು ಸಂಚಾರ ಸ್ಥಗಿತ-ಪರೀಕ್ಷಾರ್ಥಿಗಳಿಗೆ ಸಂಕಟ!
ಹಾಸನ ಜಿಲ್ಲಾ ವ್ಯಾಪ್ತಿಯ ಎಡಕುಮೇರಿ-ಸಿರಿಬಾಗಿಲು ಮಧ್ಯೆ ಹಳಿಗಳ ಮೇಲೆ ಶನಿವಾರ ತಡರಾತ್ರಿ ಮಣ್ಣು ಕುಸಿದು ಮಂಗಳೂರು-ಬೆಂಗಳೂರು ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಹೊರಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್ ಪರೀಕ್ಷೆ ಬರೆಯಲು ಹೊರಟಿದ್ದ ಕರಾವಳಿಯ 80ಕ್ಕೂ ಅಧಿಕ ಅಭ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದರು. ರಾತ್ರಿ 7.30ರಿಂದ ಮಧ್ಯರಾತ್ರಿ 3.30ರ ವರೆಗೆ ರೈಲು ಎಡಕುಮೇರಿಯಲ್ಲೇ ನಿಂತಿತ್ತು. ಬಳಿಕ ಅಭ್ಯರ್ಥಿಗಳನ್ನು ನೆಟ್ಟಣದಿಂದ ಕೆಎಸ್‌ಆರ್‌ಟಿಸಿ ಹಾಗೂ ಮಿನಿ ಬಸ್‌ಗಳ ಮೂಲಕ ಹಾಸನಕ್ಕೆ ಕರೆದೊಯ್ಯಲಾಯಿತಾದರೂ, ಸಮಯ ಅಭಾವದಿಂದ ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಕಂಗಾಲಾದರು. ಇತ್ತ ಮಂಗಳೂರಿನಲ್ಲಿ ಪರೀಕ್ಷೆ ಬರೆಯಬೇಕಿದ್ದ ಹೊರಜಿಲ್ಲೆಯ ಅಭ್ಯರ್ಥಿಗಳು ರಾತ್ರೋರಾತ್ರಿ ಬಸ್‌ಗಳ ಮೂಲಕ ನಗರಕ್ಕೆ ಧಾವಿಸುವಂತಾಯಿತು.
----------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net