ಇತಿಹಾಸದ ಕಡೆಗೆ ಕರೆದೊಯ್ಯುತಿದೆ ‘ಫಿಲಾನಮಿಸ್ಟ್’ ಅಂಚೆಚೀಟಿಗಳು ಮತ್ತು ನಾಣ್ಯಗಳ ಪ್ರದರ್ಶನ

ಪ್ರಶಾಂತ್ ಶೇಟ್ ಅವರ ತಾಯಿ ಪದ್ಮಾ ಆರ್. ಶೇಟ್ ಅವರು ‘ಫಿಲಾನಮಿಸ್ಟ್’ ಬುಕ್ ಲೆಟ್ ಬಿಡುಗಡೆಗೊಳಿಸಿದರು.
ಪ್ರಶಾಂತ್ ಶೇಟ್ ಅವರ ತಾಯಿ ಪದ್ಮಾ ಆರ್. ಶೇಟ್ ಅವರು ‘ಫಿಲಾನಮಿಸ್ಟ್’ ಬುಕ್ ಲೆಟ್ ಬಿಡುಗಡೆಗೊಳಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ‘ಫಿಲಾನಮಿಸ್ಟ್’ ಅಂಚೆಚೀಟಿಗಳು ಮತ್ತು ನಾಣ್ಯಗಳ ಪ್ರದರ್ಶನ
  • ಮಂಗಳೂರಿನ ಎಂ.ಪ್ರಶಾಂತ್ ಶೇಟ್ ಅವರ ಸಂಗ್ರಹ
  • 800 ನಾಣ್ಯ, 2,000 ಅಂಚೆಚೀಟಿ ಪ್ರದರ್ಶನ
ಮಂಗಳೂರು: ಮಂಗಳೂರಿನ ಎಂ.ಪ್ರಶಾಂತ್ ಶೇಟ್ ಅವರ ಸಂಗ್ರಹದ ಅಪಾರ ಪ್ರಮಾಣದ ಅಂಚೆಚೀಟಿಗಳು ಹಾಗೂ ನಾಣ್ಯಗಳ ಪ್ರದರ್ಶನ ಜ್ಞಾನಾರ್ಜನೆಗೆ ವೇದಿಕೆ ಕಲ್ಪಿಸಿದೆ ಎಂದು ನಿಟ್ಟೆ ವಿ.ವಿ. ಕುಲಪತಿ ಪ್ರೊ.ಎಂ. ಎಸ್. ಮೂಡಿತ್ತಾಯ ಹೇಳಿದರು.
ನಗರದ ಟಿ.ಎಂ.ಎ. ಪೈ ಕನ್‌ವೆನ್ಷನ್ ಸೆಂಟರ್‌ನಲ್ಲಿ ಶನಿವಾರದಿಂದ ಆಯೋಜಿಸಲಾದ ಎರಡು ದಿನಗಳ ‘ಫಿಲಾನಮಿಸ್ಟ್’ ಅಂಚೆಚೀಟಿಗಳು ಮತ್ತು ನಾಣ್ಯಗಳ ಪ್ರದರ್ಶನ ಉದ್ಘಾಟಿಸಿ, ಅವರು ಮಾತನಾಡಿದರು. ವಿಶ್ವ ವಿದ್ಯಾಲಯಗಳು ಸೇರಿದಂತೆ ಜ್ಞಾನಾಧಾರಿತ ಕೇಂದ್ರಗಳು ಮಾಡುವ ಕೆಲಸವನ್ನು ಪ್ರಶಾಂತ್ ಶೇಟ್ ಅವರು ಮಾಡಿದ್ದಾರೆ. ಜಗತ್ತಿನ ಆರ್ಥಿಕತೆ, ಸಾಮಾಜಿಕ ಬೆಳವಣಿಗೆ, ಪ್ರಕೃತಿ ಸಂಭ್ರಮ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರದರ್ಶನದಿಂದ ಬಹಳಷ್ಟು ಜ್ಞಾನ ಪಡೆಯಬಹುದು ಎಂದರು.
ದ.ಕ. ಜಿಲ್ಲಾ ಚೆಸ್ ಎಸೋಸಿಯೇಶನ್ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ ಶೆಟ್ಟಿ ತಿಥಿಯಾಗಿದ್ದರು. ತಂದೆಯಿಂದ ಬಂದ ಹವ್ಯಾಸವನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳುವ ಕೆಲಸವನ್ನು ಪ್ರಶಾಂತ್ ಶೇಟ್ ಮತ್ತು ಕುಟುಂಬಿಕರು ಮಾಡಿದ್ದಾರೆ. ಈ ಕಾರ್ಯದಿಂದ ಇನ್ನೊಬ್ಬರಿಗೆ ಪ್ರೇರಣೆ ದೊರಕಲಿ ಎಂದರು.
ಪ್ರಶಾಂತ್ ಶೇಟ್ ಅವರ ತಾಯಿ ಪದ್ಮಾ ಆರ್. ಶೇಟ್ ಅವರು ‘ಫಿಲಾನಮಿಸ್ಟ್’ ಬುಕ್ ಲೆಟ್ ಬಿಡುಗಡೆಗೊಳಿಸಿದರು. ರಾಜ್ಯ ನಾಣ್ಯಶಾಸ್ತ್ರ ಸಂಘದ ಅಧ್ಯಕ್ಷ ರಾಜೇಂದ್ರ ಮಾರು, ಮರ್ಕಡ್ ಪ್ರಭಾಕರ ಕಾಮತ್, ಮೀನುಗಾರಿಕ ಕಾಲೇಜಿನ ಮಾಜಿ ಡೀನ್ ಎಚ್.ಎಂ. ಶಿವಪ್ರಕಾಶ್, ಪ್ರಶಾಂತ್ ಶೇಟ್ ಅವರ ಮನೆಯವರಾದ ರಾಧಿಕಾ ಶೇಟ್, ಆರ್ಯನ್ ಶೇಟ್, ಹೇಮಂತ್ ಶೇಟ್, ನಿಶಾಂತ್ ಶೇಟ್ ಉಪಸ್ಥಿತರಿದ್ದರು.
ಸೌಜನ್ಯ ಹೆಗ್ಡೆ ನಿರೂಪಿಸಿದರು.
ಇಂದು ವಿಚಾರ ಸಂಕಿರಣ
ನ.23ರಂದು ಪ್ರಸಿದ್ಧ ತಜ್ಞರಿಂದ ಅಪರೂಪದ ಕರೆನ್ಸಿ ನೋಟುಗಳು ಮತ್ತು ಅವುಗಳ ಇತಿಹಾಸ, ಜಲಪಕ್ಷಿಗಳು ಮತ್ತು ಪಕ್ಷಿ ಪ್ರಭೇದಗಳ ಥೀಮ್, ಸಂಗ್ರಹಕ್ಕೆ ಮೌಲ್ಯವರ್ಧನೆ, ಪಶ್ಚಿಮ ಗಂಗಾ ರಾಜವಂಶದ ಚಿನ್ನದ ನಾಣ್ಯಗಳು ಹಾಗೂ ಫಾಕ್ಲ್ಯಾಂಡ್ ದ್ವೀಪ ಕುರಿತು ವಿಚಾರ ಸಂಕಿರಣ ನಡೆಯಲಿದೆ. ವೀಕ್ಷಣೆಗೆ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
800 ನಾಣ್ಯ, 2,000 ಅಂಚೆಚೀಟಿ ಪ್ರದರ್ಶನ
ಈ ಪ್ರದರ್ಶನದಲ್ಲಿ 800 ನಾಣ್ಯಗಳು, 2000 ಅಂಚೆ ಚೀಟಿಗಳ ಪ್ರದರ್ಶನಕ್ಕೆ ಇಡಲಾಗಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ ಬಳಕೆಗೆ ಬಂದ 17 ನೇ ಶತಮಾನದ ಆಫ್ರಿಕನ್ ನಾಣ್ಯ, ಚೀನಾ, ಜಪಾನ್, ದಕ್ಷಿಣ ಏಷ್ಯಾ ನಾಣ್ಯಗಳು ಸೇರಿದಂತೆ 40ಕ್ಕೂ ಅಧಿಕ ದೇಶಗಳ ಅಪರೂಪದ 800ಕ್ಕೂ ಅಧಿಕ ನಾಣ್ಯಗಳು, ಇತಿಹಾಸದ ಮಹತ್ವ ಸಾರುವ 2,000ಕ್ಕೂ ಅಧಿಕ ಅಂಚೆ ಚೀಟಿಗಳು, 1,500 ಪೋಸ್ಟ್ ಕಾರ್ಡ್ ಗಳು ಪ್ರದರ್ಶನದಲ್ಲಿರುತ್ತವೆ. ಗಾಜು, ಚಿಪ್ಪು, ಚಿನ್ನ, ಸಿರಾಮಿಕ್, ವಜ್ರ, ಮೈಕ್ರೋಚಿಪ್ ಮೊದಲಾದವುಗಳ ಮೇಲೆ ಮುದ್ರಿತವಾದ ಅಂಚೆಚೀಟಿಗಳು, 1840ರ ಇಂಡೋ-ಪೋರ್ಚುಗೀಸ್ ಮೊದಲ ಅಂಚೆಚೀಟಿಗಳ ಅಪೂರ್ವ ಸಂಗ್ರಹ ಕೂಡ ಪ್ರದರ್ಶನ ಕಾಣುತ್ತಿದೆ.
"

ಬಾಲ್ಯದಲ್ಲೇ ನನಗೆ ಅಂಚೆಚೀಟಿಗಳು ಮತ್ತು ನಾಣ್ಯಗಳ ಸಂಗ್ರಹದ ಬಗ್ಗೆ ಆಸಕ್ತಿ ಮೂಡಿತು. ಸುಮಾರು 40 ವರ್ಷಗಳ ಸಂಗ್ರಹವಿದೆ. ಇಂತಹ ಹವ್ಯಾಸ ಮುಂದುವರಿಸಬೇಕಾದರೆ ಬಹಳಷ್ಟು ತಾಳ್ಮೆ ಬೇಕು. ಕೌಶಲ್ಯಾಭಿವೃದ್ಧಿಗೆ ಪೂರಕವಾಗಿದೆ.

ಎಂ.ಪ್ರಶಾಂತ್ ಶೇಟ್ ಅಂಚೆಚೀಟಿ, ನಾಣ್ಯಗಳ ಸಂಗ್ರಾಹಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net