ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ವಿರೋಧ

 ಕಳಾರದಲ್ಲಿ ಆರಂಭಗೊಂಡಿರುವ ಮಲತ್ಯಾಜ್ಯ ಸಂಸ್ಕರಣ ಟಕ ಕಾಮಗಾರಿ.
ಕಳಾರದಲ್ಲಿ ಆರಂಭಗೊಂಡಿರುವ ಮಲತ್ಯಾಜ್ಯ ಸಂಸ್ಕರಣ ಟಕ ಕಾಮಗಾರಿ.
Published on
 ವಿಜಯವಾಣಿ ಸುದ್ದಿಜಾಲ ಕಡಬ 
 ಪಟ್ಟಣ ಪಂಚಾಯಿತಿ ವತಿಯಿಂದ ಕಳಾರದ ಬಳಿಯ ತಿಮರಡ್ಡದಲ್ಲಿ ನಿರ್ಮಾಣವಾಗಲಿರುವ ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಕೋಡಿಂಬಾಳಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ ಎಂಬ ಮಾಹಿತಿಯಂತೆ ಕೋಡಿಂಬಾಳ ನಿವಾಸಿಗಳು ಮಂಗಳವಾರ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿ, ಘಟಕ ನಿರ್ಮಾಣ ಮಾಡದಂತೆ ಆಗ್ರಹಿಸಿದರು. 
 ಕಳಾರದ ತಿಮರಡ್ಡದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಅಲ್ಲಿನ ಜನರು ವಿರೋಧ ವ್ಯಕ್ತಪಡಿಸಿ ಬೇರೆಡೆಗೆ ಸ್ಥಳಾಂತರಿಸುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಕಡಬ ಪ.ಪಂ ಆಡಳಿತ ಮಂಡಳಿ ಕೋಡಿಂಬಾಳದ ನೆಲ್ಲಿಪಡ್ಪುವಿನಲ್ಲಿ ಜಾಗ ಪರಿಶೀಲಿಸಿತ್ತು. ಈ ಮಾಹಿತಿ ಸಿಕ್ಕಿದ ಕೂಡಲೇ ಕೋಡಿಂಬಾಳದ ಜನರೂ ತಕರಾರು ತೆಗೆದು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. 

ತುರ್ತುಸಭೆ

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್ ಅಧ್ಯಕ್ಷತೆಯಲ್ಲಿ ಮಂಗಳವಾರ  ತುರ್ತು ಸಭೆ ನಡೆಸಿದ್ದು, ಕಳಾರದ ತಿಮರಡ್ಡ ಹಾಗೂ ಕೋಡಿಂಬಾಳದ ನೆಲ್ಲಿಪಡ್ಪಿನ ಜಾಗ ಕೈಬಿಟ್ಟು ಮತ್ತೊಂದು ಜಾಗ ನಿದಿಗೊಳಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. 

3 ಕೋಟಿ ರೂ. ಅನುದಾನ

ಮಲತ್ಯಾಜ್ಯ ಸಂಸ್ಕರಣಾ ಘಟಕ ಯೋಜನೆ ಅನುಷ್ಠಾನಕ್ಕೆ 3 ಕೋಟಿ ರೂ. ಮಂಜೂರುಗಳಿಸಲಾಗಿದೆ. ಈ ಯೋಜನೆಗಾಗಿ ಕಡಬ ಸಮೀಪದ ಕಳಾರ ತಿಮರಡ್ಡದಲ್ಲಿ 50 ಸೆಂಟ್ಸ್ ಜಾಗವನ್ನು ತಹಸೀಲ್ದಾರ್ ಮಂಜೂರುಗೊಳಿಸಿದ್ದರು. ಬೆಂಗಳೂರಿನ ಸಂಸ್ಥೆ ಗುತ್ತಿಗೆ ಪಡೆದು ಕಾಮಗಾರಿ ಆರಂಭಿಸಿತ್ತು. ವಾರ್ಚ್ ಒಳಗೆ ಪ್ರಥಮ ಹಂತದ  ಕಾಮಗಾರಿ ಪ್ರಾರಂಭಿಸದಿದ್ದರೆ ಅನುದಾನ ಹಿಂಪಡೆಯುವುದರ ಜತೆಗೆ ಪಟ್ಟಣ ಪಂಚಾಯಿತಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net