ಅನಧಿಕೃತ ಪಿಜಿಗಿಲ್ಲ ಬ್ರೇಕ್

 ಮಂಗಳೂರು ಇತ್ತೀಚಿನ ದಿನಗಳಲ್ಲಿ ಅನಧಿಕೃತ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ನಿಲಯಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಮಂಗಳೂರು ಇತ್ತೀಚಿನ ದಿನಗಳಲ್ಲಿ ಅನಧಿಕೃತ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ನಿಲಯಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
Published on
ಮಂಗಳೂರು: ಮಂಗಳೂರು ಇತ್ತೀಚಿನ ದಿನಗಳಲ್ಲಿ ಅನಧಿಕೃತ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ನಿಲಯಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ವ್ಯಾಪಾರ ಪರವಾನಗಿ ಇಲ್ಲದೆ ನೂರಾರು ಪಿಜಿಗಳು ವಸತಿ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ನಿಯಮಗಳ ಪ್ರಕಾರ ಪಿಜಿ ನಡೆಸಲು ಪ್ರತ್ಯೇಕ ಸ್ವತಂತ್ರ ಮನೆ ಹಾಗೂ ವಾಣಿಜ್ಯ ಪರವಾನಗಿ ಕಡ್ಡಾಯವಾಗಿದ್ದರೂ, ಬಹುತೇಕ ಪಿಜಿಗಳು ವಸತಿ ಸಮುಚ್ಚಯಗಳಲ್ಲೇ (ಫ್ಲಾಟ್ಸ್) ರಾಜಾರೋಷವಾಗಿ ನಡೆಯುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರು ನಗರದ ಸೌಂದರ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಈ ಅನಧಿಕೃತ ಪಿಜಿ ಜಾಲಕ್ಕೆ ಮುಕ್ತಿ ನೀಡುವ ಕಾರ್ಯಕ್ಕೂ ಮುಂದಾಗುತ್ತಿಲ್ಲ. ವಿಜಯವಾಣಿಗೆ ಲಭ್ಯ ಮಾಹಿತಿಯಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 48 ಹಾಸ್ಟೇಲ್, 417 ಪಿಜಿ ನಡೆಸಲು ಪರವಾಣಗಿ ನೀಡಲಾಗಿದೆ. 2026 ನೇ ಸಾಲಿನಲ್ಲಿ ಬಹುತೇಕ ಪಿಜಿ ಗಳು ತಮ್ಮ ಪರವಾಣಗಿಗಳನ್ನು ನವೀಕರಿಸಿಲ್ಲ, ಆದರೆ ಈ ನವೀಕರಿಸದ ಪಿಜಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.
*ಫ್ಲಾಟ್‌ಗಳಲ್ಲಿ ಪಿಜಿ ದಂಧೆ!
ಕರ್ನಾಟಕ ಓನರ್‌ಶಿಪ್ ಫ್ಲಾಟ್ಸ್ ಕಾಯಿದೆಯನ್ವಯ (ಕೆಓಎಫ್‌ಎ) ವಸತಿ ಸಮುಚ್ಚಯಗಳಲ್ಲಿ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ವಾಣಿಜ್ಯ ಉದ್ದೇಶದ ಪಿಜಿಗಳನ್ನು ನಡೆಸಲು ಯಾವುದೇ ಅವಕಾಶವಿಲ್ಲ. ಆದರೆ, ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ಕಾನೂನನ್ನು ಸಂಪೂರ್ಣವಾಗಿ ಕಡೆಗಣಿಸಿ, ಫ್ಲಾಟ್‌ಗಳಲ್ಲಿ ಪಿಜಿ ನಡೆಸಲು ಪರೋಕ್ಷವಾಗಿ ಅನುಮತಿ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಾಲಿಕೆಯ ಅಧಿಕಾರಿಗಳು ಮತ್ತು ಪಿಜಿ ಮಾಲೀಕರ ನಡುವಿನ ಶಾಮೀತಿಯಿಂದಾಗಿಯೇ ಈ ಅನಧಿಕೃತ ದಂಧೆಗೆ ಬ್ರೇಕ್ ಬಿದ್ದಿಲ್ಲ ಎನ್ನಲಾಗುತ್ತಿದೆ.
*ನಿಯಮಾವಳಿಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ!
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಮಹಾನಗರ ಪಾಲಿಕೆಯ ಕಟ್ಟುನಿಟ್ಟಿನ ನಿಯಮಾವಳಿಗಳ ಪ್ರಕಾರ, ನಗರದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪಿಜಿ ಮತ್ತು ಹಾಸ್ಟೆಲ್‌ಗಳು ಸ್ಥಳೀಯ ಪಾಲಿಕೆಯಿಂದ ವ್ಯಾಪಾರ ಪರವಾನಗಿ ಮತ್ತು ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ. ಆದರೆ, ಪ್ರಸ್ತುತ ನಗರದಲ್ಲಿರುವ ಶೇಕಡಾ 80ಕ್ಕೂ ಹೆಚ್ಚು ಪಿಜಿಗಳಲ್ಲಿ ಈ ಯಾವುದೇ ದಾಖಲೆಗಳಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರ ಸುರಕ್ಷತೆ ಈಗ ಪ್ರಶ್ನಾರ್ಥಕವಾಗಿದೆ. ಬಹುತೇಕ ಪಿಜಿಗಳಲ್ಲಿ ಕಮರ್ಷಿಯಲ್ (ವಾಣಿಜ್ಯ) ಗ್ಯಾಸ್ ಸಿಲಿಂಡರ್ ಬಳಸುವ ಬದಲು, ಅಕ್ರಮವಾಗಿ ಗೃಹಬಳಕೆಯ ಸಿಲಿಂಡರ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದು ಸರ್ಕಾರದ ಸಬ್ಸಿಡಿ ದುರ್ಬಳಕೆಯಷ್ಟೇ ಅಲ್ಲದೆ, ವಸತಿ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ಅಗ್ನಿ ಅವಘಡಗಳಿಗೆ ಆಹ್ವಾನ ನೀಡಿದಂತಾಗಿದೆ.
ಕರ್ನಾಟಕ ಓನರ್‌ಶಿಪ್ ಫ್ಲಾಟ್ಸ್ ಕಾಯಿದೆ ಉಲ್ಲಂಘಿಸಿ ಪಾಲಿಕೆಯಿಂದ ವಸತಿ ಸಮುಚ್ಚಯವೊಂದಕ್ಕೆ ಪಿಜಿ ನಡೆಸಲು ಪರವಾಣಗಿ ನೀಡಿರುವುದು.

------------------
ಪಾಲಿಕೆಯಿಂದ ಜಿಲ್ಲಾಧಿಕಾರಿಗೆ ಸುಳ್ಳು ಮಾಹಿತಿ!
ಬಳ್ಳಾಲ್‌ಭಾಗ್ ಸಮೀಪದ ಆ್ಯಪಲ್‌ಪಾರ್ಕ್ ಬಿ ವಸತಿ ಸಮುಚ್ಚಯದಲ್ಲಿ ಪಾಲಿಕೆ ಅನುಮತಿ ರಹಿತ ಪಿಜಿ ಇರುವ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಈಬಗ್ಗೆ ಪಾಲಿಕೆಯಿಂದ ವರದಿ ಕೇಳಲಾಗಿತ್ತು. ಆದರೆ ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಇಲ್ಲಿನ 1 ವಸತಿ ಸಮುಚ್ಚಯದಲ್ಲಿ 12ಕ್ಕೂ ಅಧಿಕ ಜನ ಇರುವುದನ್ನು ಪತ್ತೆ ಹಚ್ಚಿದ್ದರು. ಆದರೆ 12 ಜನ ಈ ವಸತಿ ಸಮುಚ್ಚಯವನ್ನು ಬಾಡಿಗೆ ಪಡೆದಿರುವುದಾಗಿ ಜಿಲ್ಲಾಧಿಕಾರಿಗಳಿಗೆ ಪಾಲಿಕೆಯಿಂದ ಸುಳ್ಳು ಮಾಹಿತಿ ನೀಡಿರುವುದೂ ಬಹಿರಂಗವಾಗಿದೆ.
------------------
ಮಂಗಳೂರು ಇತ್ತೀಚಿನ ದಿನಗಳಲ್ಲಿ ಪರವಾಣಗಿ ರಹಿತ ಪಿಜಿಗಳ ಬಗ್ಗೆ ನಿಗಾ ವಹಿಸಲಾಗಿದೆ. ಪರವಾಣಗಿ ಅವಧಿ ಮೀರಿದ ನಂತರವೂ ನವೀಕರಣಗೊಳಿಸದೆ ಪಿಜಿ ನಡೆಸಿರುವವರ ಮಾಹಿತಿ ಪಡೆದು ಇತ್ತೀಚೆಗೆ ನೊಟೀಸ್ ನೀಡಲಾಗಿದೆ. ವಸತಿ ಸಮುಚ್ಚಯದಲ್ಲಿ ಅನಧಿಕೃತವಾಗಿ ಪಿಜಿ ನಡೆಸಿರುವ ಬಗ್ಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
-ರವಿಚಂದ್ರ ನಾಯಕ್, ಆಯುಕ್ತರು
ಮಂಗಳೂರು ಮಹಾನಗರ ಪಾಲಿಕೆ
---------------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net