

ವಿಜಯವಾಣಿ ಸುದ್ದಿಜಾಲ ಕುಂಬಳೆ
ಕರ್ನಾಟಕ ಸರ್ಕಾರದ ವಿರೋಧದಿಂದಾಗಿ ನನೆಗುದಿಗೆ ಬಿದ್ದಿದ್ದ ಕಾಣಿಯೂರು-ಕಾಞಂಗಾಡ್ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಗೆ ಮತ್ತೆ ಜೀವ ತುಂಬುವ ಪ್ರಯತ್ನಗಳು ಆರಂಭವಾಗಿವೆ. ಈ ನಿಟ್ಟಿನಲ್ಲಿ ಕಾಞಂಗಾಡ್ನ ಯುಡಿಎಫ್ ನಿಯೋಗ ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಕೇರಳ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೆ ಕರ್ನಾಟಕದ ಬೆಂಬಲವೂ ದೊರೆಯಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
2014-15ರಲ್ಲಿ ಕಾಞಂಗಾಡ್-ಕಾಣಿಯೂರು ರೈಲ್ವೆ ಮಾರ್ಗದ ಸಮೀಕ್ಷೆಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿತ್ತು. ಒಟ್ಟು 91 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 41 ಕಿ.ಮೀ ಕೇರಳದಲ್ಲಿ ಹಾಗೂ 49.5 ಕಿ.ಮೀ ಕರ್ನಾಟಕದಲ್ಲಿ ಹಾದುಹೋಗಲಿದೆ. ಆರ್ಥಿಕವಾಗಿ ಲಾಭದಾಯಕ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದ್ದರೂ ಕರ್ನಾಟಕದಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಕಾರಣ ಯೋಜನೆ ಮುಂದುವರಿದಿರಲಿಲ್ಲ. ಭೂಸ್ವಾಧೀನ ವೆಚ್ಚದ ಪಾಲಿನ ಬಗ್ಗೆಯೂ ಸ್ಪಷ್ಟತೆ ಇರಲಿಲ್ಲ.
2017ರಲ್ಲಿ ಸುಮಾರು 1,500 ಕೋ. ರೂ.ಯೋಜನಾ ವೆಚ್ಚ ಅಂದಾಜಿಸಲಾಗಿತ್ತು. ವೆಚ್ಚದ ಶೇ.50ರಷ್ಟನ್ನು ರೈಲ್ವೆ ಇಲಾಖೆ ಭರಿಸಲಿದ್ದು, ಉಳಿದ ಶೇ.50ನ್ನು ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಜಂಟಿಯಾಗಿ ಭರಿಸಬೇಕಿದೆ. ಈ ಹಿಂದೆ ಕೇರಳ ಸರ್ಕಾರ ನೀಡಿದ್ದ ಸಮ್ಮತಿ ಪತ್ರದ ಗಡುವು ಮುಗಿದಿರುವುದರಿಂದ ವೆಚ್ಚ ಹಂಚಿಕೆ ಸೇರಿದಂತೆ ಅಗತ್ಯ ಅಂಶಗಳನ್ನು ಸ್ಪಷ್ಟಪಡಿಸಿ ಹೊಸ ಪತ್ರ ಸಲ್ಲಿಸಬೇಕಿದೆ. ಅಲ್ಲದೆ, ಯೋಜನೆಗೆ ಹೊಸ ಅಂದಾಜು ಪಟ್ಟಿ ಸಿದ್ಧಪಡಿಸುವ ಅಗತ್ಯ ಇದೆ.
ಈ ಮಾರ್ಗವು ಪರಿಸರ ಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗುವುದರಿಂದ ಕರ್ನಾಟಕ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಮಾರ್ಗ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ ಎಂದು ತಜ್ಞರು ಈಗಾಗಲೇ ಕಂಡುಕೊಂಡಿದ್ದಾರೆ ಎನ್ನಲಾಗಿದೆ.
ಕಾಞಂಗಾಡ್-ಕಾಣಿಯೂರು ರೈಲು ಮಾರ್ಗವನ್ನು ಶ್ರೀ ಅನುಷ್ಠಾನಗೊಳಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಕೋರಿ ಯುಡಿಎಫ್ ನಿಯೋಗ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರಿಗೆ ಮನವಿ ಸಲ್ಲಿಸಿದೆ. ಕೇರಳ ಸರ್ಕಾರ ಮುತುವರ್ಜಿ ವಹಿಸಿ ಕೇಂದ್ರ ಹಾಗೂ ಕರ್ನಾಟಕ ಸರ್ಕಾರಗಳ ಸಹಭಾಗಿತ್ವ ಖಚಿತಪಡಿಸಿಕೊಳ್ಳಬೇಕು ಎಂದು ನಿಯೋಗ ಆಗ್ರಹಿಸಿದೆ. ಮನವಿ ಪರಿಶೀಲಿಸಿದ ಮುಖ್ಯಮಂತ್ರಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಾಣಿಯೂರು ಯೋಜನೆ ಸಾಕಾರಗೊಳಿಸಲು ಪ್ರಯತ್ನ ಮುಂದುವರಿಯಲಿದೆ ಎಂದು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ. ಮುಸ್ಲಿಂ ಲೀಗ್ ರಾಜ್ಯ ಕಾರ್ಯದರ್ಶಿ ಬಶೀರ್ ವೆಳ್ಳಿಕೋತ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಸುರೇಶ್, ಮುಸ್ಲಿಂ ಲೀಗ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಜಾಫರ್, ಲೀಗ್ ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಹಾಗೂ ನಗರಸಭಾ ಅಧ್ಯಕ್ಷ ಕೆ.ಮುಹಮ್ಮದ್ ಕುಂಞ, ಸಂಸ್ಕಾರ ಸಾಹಿತಿ ಜಿಲ್ಲಾಧ್ಯಕ್ಷ ಬಶೀರ್ ಆರಂಗಾಡಿ ನಿಯೋಗದಲ್ಲಿದ್ದರು.
ಪ್ರಸ್ತುತ ಕಾಞಂಗಾಡ್ನಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಲು 10 ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಕಾಣಿಯೂರು ರೈಲು ಮಾರ್ಗ ಪೂರ್ಣಗೊಂಡರೆ ಕೇವಲ 7 ಗಂಟೆಗಳಲ್ಲಿ ಬೆಂಗಳೂರು ತಲುಪಬಹುದು. ಸುಮಾರು 200 ಕಿ.ಮೀ ದೂರ ಕಡಿಮೆಯಾಗಲಿದೆ. ಇದರಿಂದ ಸರಕು ಸಾಗಣೆ ವೇಗಗೊಳ್ಳುವುದರ ಜತೆಗೆ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ತಲಕಾವೇರಿ, ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ತೆರಳುವವರಿಗೆ ಹಾಗೂ ಕರ್ನಾಟಕದಿಂದ ಕೊಟ್ಟಿಯೂರು, ಗುರುವಾಯೂರು, ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಪ್ರಸ್ತುತ ಪಾಣತ್ತೂರಿನಿಂದ ಬೆಂಗಳೂರಿಗೆ ತೆರಳಲು ಪಾಣತ್ತೂರು-ಸುಳ್ಯ ರಸ್ತೆ ಮಾತ್ರ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ರೈಲು ಸಂಪರ್ಕ ಕಲ್ಪಿಸಿದರೆ ಎರಡೂ ರಾಜ್ಯಗಳ ಪ್ರವಾಸಿ ತಾಣಗಳಿಗೆ ಇತರ ರಾಜ್ಯಗಳ ಪ್ರವಾಸಿಗರು ಸುಲಭವಾಗಿ ಭೇಟಿ ನೀಡಬಹುದು. ಪ್ರಸಿದ್ಧ ರಾಣಿಪುರಂ ಪ್ರವಾಸಿ ತಾಣಕ್ಕೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ನೆರವಾಗಲಿದೆ. ಮಂಗಳೂರು ಕೈತಪ್ಪಿದ ಪಾಲಕ್ಕಾಡ್ ರೈಲ್ವೆ ವಿಭಾಗಕ್ಕೂ ಈ ಮಾರ್ಗ ಉಪಯುಕ್ತವಾಗಲಿದೆ.