ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಅಪರಾಧಿಗೆ 20 ವರ್ಷ ಜೈಲು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ -2( ಪೋಕ್ಸೋ) ನ್ಯಾಯಾಲಯದಲ್ಲಿ ಸಾಬೀತಾಗಿದ್ದು ನ್ಯಾಯಾಧೀಶರು ಅಪರಾಧಿಗೆ 20 ವರ್ಷಗಳ ಕಠಿನ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಮುನ್ನೂರು ನಿವಾಸಿ ಮಹೇಶ ಮಾದರ (20) ಶಿಕ್ಷಗೊಳಗಾದ ಅಪರಾಧಿ.
ಸಂತ್ರಸ್ತ ಅಪ್ರಾಪ್ತ ವಯಸ್ಸಿನ ಬಾಲಕಿ ನಗರದ ಹೊರವಲಯದಲ್ಲಿ ಬಾಡಿಗೆ ಮನೆಯಲ್ಲಿ ಹೆತ್ತವರೊಂದಿಗೆ ವಾಸವಾಗಿ, ಹೋಮ್ ನರ್ಸ್ ಕೆಲಸ ಮಾಡಿಕೊಂಡಿದ್ದಳು. ಮಹೇಶ ಮಾದರ ಕೂಡಾ ಪಕ್ಕದ ಮನೆಯಲ್ಲಿ ವಾಸವಾಗಿದ್ದ. ಇದರಿಂದ ಪರಿಚಯವಾಗಿ ಇಬ್ಬರೂ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದು ಹೆತ್ತವರು ಆಕೆಗೆ ಬುದ್ದಿಮಾತು ಹೇಳಿದ್ದು, ಆತನ ಸಂಪರ್ಕದಿಂದ ದೂರಮಾಡಿ, ಕೆಲಸದಿಂದ ಬಿಡಿಸಿದ್ದರು. ತಾನು ಕೆಲಸಕ್ಕೆ ಹೋಗಬೇಕು ಎಂದು ಹಠಮಾಡಿ 2015ರ ಮೇ 14ರಂದು ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದಳು. ಮೇ19ರಂದು ಮನೆಯೊಂದರಲ್ಲಿ ಆಕೆ ಕೆಲಸ ಮಾಡುತ್ತಿದ್ದ ವೇಳೆ ಕರೆ ಮಾಡಿದ ಮಹೇಶ, ನೀನು ಕೂಡಲೇ ಹೊರಟು ಬಾ. ನಾವಿಬ್ಬರೂ ಬೇರೆ ಕಡೆ ಹೋಗೋಣ. ಬಾರದೇ ಇದ್ದರೆ, ತಂದೆ ತಾಯಿಯನ್ನು ಕೊಂದು, ತಾನೂ ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ಆಕೆಯನ್ನು ಬಲ್ಲಾಳ್ ಬಾಗ್ ಗೆ ಕರೆಸಿ ಅಲ್ಲಿಂದ ಆಟೋದಲ್ಲಿ ಕಾವೂರು ಬಳಿಯ ಶೆಡ್ ಗೆ ಕರೆದುಕೊಂಡು ಹೋಗಿದ್ದು, ಇಬ್ಬರೂ ಅಲ್ಲಿ ಉಳಿದು ಕೊಂಡಿದ್ದರು. ಅಂದು ರಾತ್ರಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. 20ರಂದು ಬೆಳಗ್ಗೆ 11 ಗಂಟೆಗೆ ಕೆಎಸ್‌ಆರ್ ಟಿಸಿ ಬಸ್ಸಿನಲ್ಲಿ ಬಳ್ಳಾರಿ ನಗರಕ್ಕೆ ಹೋಗಿ, ಬಾಡಿಗೆ ಮನೆಗಾಗಿ ಹುಡುಕಾಟ ನಡೆಸಿ ಸಿಗದಿದ್ದಾಗ, ನಾಗಲಕೇರೆ ಎಂಬಲ್ಲಿ ಜನ ವಸತಿ ಇಲ್ಲದ ಪಾಳು ಬಿದ್ದ ಮನೆಯಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಮೇ 22ರಂದು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ.
ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯವರು ನೀಡಿದ ದೂರಿನಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು ಆತನ ವಿರುದ್ಧ ಬಿಎನ್‌ಎಸ್ ಕಲಂ 137(2), , 65(1) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣ ಅಧಿನಿಯಮ ಮತ್ತು ನಿಯಮ 2012 (ಪೋಕ್ಸೋ) ಕಲಂ 52 ಮತ್ತಯ 6ರಡಿ ಶಿಕ್ಷಾರ್ಹ ಅಪರಾಧ ಎಸಗಿರುವ ಬಗ್ಗೆ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಠಾಣೆಯ ಆಗಿನ ಪಿಎಸ್‌ಐ ರೇಖಾ ಆರ್. ಅವರು ತನಿಖೆ ಪೂರ್ಣಗೊಳಿಸಿದ್ದು, ಪೊಲೀಸ್ ನಿರೀಕ್ಷಕ ಗುರುರಾಜ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ -2( ಪೋಕ್ಸೋ) ನ್ಯಾಯಾಲದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು, ಮಹೇಶ ಮಾದರನ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ಪೋಕ್ಸೋ ಕಲಂ 6 ಮತ್ತು ಬಿಎನ್ ಎಸ್ ಕಲಂ 65(1) ರಡಿ 20 ವರ್ಷ ಕಠಿನ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿದ್ದಾರೆ. ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆ. ಆಕೆಯನ್ನು ಅಪಹರಣ ಮಾಡಿರುವ ಹಿನ್ನೆಲೆಯಲ್ಲಿ ಬಿಎನ್ ಎಸ್ ಕಲಂ 137(2) ರಡಿ 3 ವರ್ಷ ಕಠಿನ ಶಿಕ್ಷೆ, 5 ಸಾವಿರ ರೂ.ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಅನುಭವಿಸಬೇಕು. ದಂಡ ಮೊತ್ತ 35 ಸಾವಿರ ರೂ. ವನ್ನು ಸಂತ್ರಸ್ತೆಗೆ ನೀಡಬೇಕು. ಜತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರವಾಗಿ 3.65 ಲಕ್ಷ ರೂ. ಸಂತ್ರಸ್ತೆಗೆ ಪಾವತಿಸಬೇಕು ಎಂದು ನಿರ್ದೇಶಿಸಿದ್ದಾರೆ.
ಪೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಸಾಕ್ಷಿ ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net