ಮಲೇರಿಯಾ ವಾರಿಯರ್ಸ್‌ಗೆ ವೇತನ ಭಾಗ್ಯ

ನರ ಆರೋಗ್ಯ ಕಾಪಾಡಲು ಹಗಲಿರುಳು ಸೊಳ್ಳೆ ಉತ್ಪತ್ತಿ ತಾಣಗಳ ಪತ್ತೆ ಹಾಗೂ ರೋಗ ನಿಯಂತ್ರಣದಲ್ಲಿ ನಿರತರಾಗಿರುವ ಮಂಗಳೂರಿನ ‘ಮಲೇರಿಯಾ ವಾರಿಯರ್ಸ್’ಗಳ ಆರ್ಥಿಕ ಶೋಷಣೆ ಮತ್ತು ಅಭದ್ರತೆಗೆ ಕೊನೆಹಾಡಲು ಆರೋಗ್ಯ ಇಲಾಖೆ ಕೊನೆಗೂ ಮುಂದಾಗಿದೆ.
ನರ ಆರೋಗ್ಯ ಕಾಪಾಡಲು ಹಗಲಿರುಳು ಸೊಳ್ಳೆ ಉತ್ಪತ್ತಿ ತಾಣಗಳ ಪತ್ತೆ ಹಾಗೂ ರೋಗ ನಿಯಂತ್ರಣದಲ್ಲಿ ನಿರತರಾಗಿರುವ ಮಂಗಳೂರಿನ ‘ಮಲೇರಿಯಾ ವಾರಿಯರ್ಸ್’ಗಳ ಆರ್ಥಿಕ ಶೋಷಣೆ ಮತ್ತು ಅಭದ್ರತೆಗೆ ಕೊನೆಹಾಡಲು ಆರೋಗ್ಯ ಇಲಾಖೆ ಕೊನೆಗೂ ಮುಂದಾಗಿದೆ.
Published on
ಮಂಗಳೂರು: ಜನರ ಆರೋಗ್ಯ ಕಾಪಾಡಲು ಹಗಲಿರುಳು ಸೊಳ್ಳೆ ಉತ್ಪತ್ತಿ ತಾಣಗಳ ಪತ್ತೆ ಹಾಗೂ ರೋಗ ನಿಯಂತ್ರಣದಲ್ಲಿ ನಿರತರಾಗಿರುವ ಮಂಗಳೂರಿನ ‘ಮಲೇರಿಯಾ ವಾರಿಯರ್ಸ್’ಗಳ ಆರ್ಥಿಕ ಶೋಷಣೆ ಮತ್ತು ಅಭದ್ರತೆಗೆ ಕೊನೆಹಾಡಲು ಆರೋಗ್ಯ ಇಲಾಖೆ ಕೊನೆಗೂ ಮುಂದಾಗಿದೆ. ಕಳೆದ ಹಲವು ವರ್ಷಗಳಿಂದ ನೆಪಮಾತ್ರದ ವೇತನಕ್ಕೆ ದುಡಿಯುತ್ತಿದ್ದ ಈ ಸಿಬ್ಬಂದಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ಮತ್ತು ಶಾಸನಬದ್ಧ ಸೌಲಭ್ಯಗಳನ್ನು ತಕ್ಷಣವೇ ಒದಗಿಸುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.
ಮಂಗಳೂರು ನಗರದಲ್ಲಿ ಸೊಳ್ಳೆ ಲಾರ್ವ ಉತ್ಪತ್ತಿ ಕೇಂದ್ರಗಳ ತಪಾಸಣೆ, 24*7 ಸಹಾಯವಾಣಿ ದೂರುಗಳಿಗೆ ಸ್ಪಂದನೆ, ವಲಸೆ ಕಾರ್ಮಿಕರ ರಕ್ತ ಪರೀಕ್ಷೆ ಹಾಗೂ ರಜಾದಿನಗಳಲ್ಲೂ ಎಡೆಬಿಡದೆ ಕೆಲಸ ಮಾಡುವ ಈ ತಂಡವು ಹಲವು ಸೌಲಭ್ಯಗಳಿಂದ ವಂಚಿತವಾಗಿದೆ. ಕಾರ್ಯಾಚರಣೆ ವೇಳೆ ಸೊಳ್ಳೆ ಕಡಿತಕ್ಕೊಳಗಾಗಿ ಅಥವಾ ಇತರ ಆರೋಗ್ಯ ಸಮಸ್ಯೆ ಎದುರಾದರೂ ಇವರಿಗೆ ಇಎಸ್‌ಐ, ಪಿಎಫ್ ಅಥವಾ ಯಾವುದೇ ಆರೋಗ್ಯ ವಿಮೆಯ ಆಸರೆ ಇರಲಿಲ್ಲ. ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೊರಗುತ್ತಿಗೆ ಸಂಸ್ಥೆಯ ಮೂಲಕ ದೊರೆಯುತ್ತಿದ್ದುದು ಮಾಸಿಕ ಕೇವಲ ರೂ.8,000 ರಿಂದ 12,000 ವೇತನ ಮಾತ್ರ!. ಈ ಬಗ್ಗೆ ವಿಜಯವಾಣಿ 2 ಬಾರಿ ವಿಶೇಷ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
*ಉಲ್ಲಂಘನೆಯಾದ ವೇತನ ನಿಯಮ
ಕೇಂದ್ರ ಸರ್ಕಾರದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ’ (ಎನ್‌ವಿಬಿಡಿಸಿಪಿ) ನಿಯಮಾವಳಿಯಂತೆ ಕ್ಷೇತ್ರ ಕಾರ್ಯಕರ್ತರಿಗೆ ಮಾಸಿಕ 17,500 ರಿಂದ 25,000 (ವಾರ್ಷಿಕ 2.1 ರಿಂದ 3.0 ಲಕ್ಷ ರೂ) ವೇತನ ನೀಡಲು ನಿರ್ದೇಶನವಿದೆ. ಆದರೆ, ಹೊರಗುತ್ತಿಗೆ ಸಂಸ್ಥೆಗಳಿಗೆ ಹೆಚ್ಚಿನ ಲಾಭ ಮಾಡಿಕೊಡುವ ಉದ್ದೇಶದಿಂದ, ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ಹೆಲ್ತ್ ಇನ್ಸ್‌ಪೆಕ್ಟರ್‌ಗಳು ಶಾಮಿಲಾಗಿ, ಒಪ್ಪಂದದಲ್ಲಿ ಗರಿಷ್ಟ 12 ಸಾವಿರ ರೂ. ಮಾತ್ರ ನೀಡಿ, ಇಎಸ್‌ಐ, ಪಿಎಫ್ ನೀಡುವ ಷರತ್ತುಗಳನ್ನೇ ಕೈಬಿಟ್ಟಿದ್ದರು. ಇದರಿಂದಾಗಿ ಈ ಕಾರ್ಮಿಕರು ದಶಕಗಳಿಂದ ಶೋಷಣೆಗೆ ಒಳಗಾಗಿದ್ದರು.
-------------------
ಯಾರಿವರು ಮಲೇರಿಯಾ ವಾರಿಯರ್ಸ್?
ಜಿಲ್ಲಾ ಮಲೇರಿಯಾ ನಿಯಂತ್ರಣ ವಿಭಾಗದ (ಡಿಎಂಓ) ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಪಡೆ, ನಿರ್ಮಾಣ ಹಂತದ ಕಟ್ಟಡಗಳ ಪರಿಶೀಲನೆ, ಮಲೇರಿಯಾ ಪತ್ತೆಯಾದ ತಕ್ಷಣ ತುರ್ತು ಕಾರ್ಯಾಚರಣೆ, ರ‌್ಯಾಪಿಡ್ ಡೈಯಾಗ್ನೋಸ್ಟಿಕ್ ಕಿಟ್ ಮೂಲಕ ಪರೀಕ್ಷೆ ಹಾಗೂ ಮನೆ ಮನೆ ಭೇಟಿ ನೀಡಿ ರೋಗ ಹರಡುವಿಕೆಯನ್ನು ತಡೆಯುವ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದೆ.
-----------------
ಡಿಎಚ್‌ಓಗೆ ಸಚಿವರ ಖಡಕ್ ನಿರ್ದೇಶನ
ತಿಂಗಳೊಳಗೆ ಸರಿಪಡಿಸಲು ಸೂಚನೆ
ತಮ್ಮದೇ ಇಲಾಖೆಯಲ್ಲಿ ನಡೆಯುತ್ತಿದ್ದ ಈ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಯು.ಟಿ. ಖಾದರ್, ತಿಂಗಳೊಳಗೆ ಈ ಸಿಬ್ಬಂದಿಯನ್ನು ಅಧಿಕೃತ ಗುತ್ತಿಗೆ/ಹೊರಗುತ್ತಿಗೆ ನೌಕರರ ವ್ಯಾಪ್ತಿಗೆ ತರಬೇಕು ಎಂದು ದ.ಕ. ಡಿಎಚ್‌ಓ ಡಾ. ಎಚ್.ಆರ್. ತಿಮ್ಮಯ್ಯ ಅವರಿಗೆ ಆದೇಶಿಸಿದ್ದಾರೆ. ಸರ್ಕಾರದ ಇತರ ಇಲಾಖೆಗಳಲ್ಲಿರುವಂತೆ ಸೂಕ್ತ ವೇತನ ಮತ್ತು ಇಎಸ್‌ಐ, ಪಿಎಫ್ ಸೌಲಭ್ಯಗಳನ್ನು ತಕ್ಷಣವೇ ಒದಗಿಸಿ, ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಕ್ರಮದಿಂದಾಗಿ ಮಲೇರಿಯಾ ವಾರಿಯರ್ಸ್ ಜೀವನದಲ್ಲಿ ಹೊಸ ಭರವಸೆ ಮೂಡಿದೆ.
------------------
ಯುಟಿ ಖಾದರ್, ಆರೋಗ್ಯ ಸಚೀವರು

ನಾನು 2ನೇ ಬಾರಿ ಆರೋಗ್ಯ ಸಚಿವನಾಗಿ ಕಾರ್ಯನಿರ್ವಹಿಸಿದ್ದರೂ ಈವರೆಗೆ ಮಲೇರಿಯಾ ಸಿಬ್ಬಂದಿಗಳ ವೇತನ, ಜೀವನ ಅಭದ್ರತೆ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ, ಇತ್ತೀಚೆಗೆ ಈ ಸಿಬ್ಬಂದಿಗಳು ಬಂದು ಅವ್ಯವಸ್ಥೆಯನ್ನು ತಿಳಿಸಿದ್ದಾರೆ. ಮಲೇರಿಯಾ ಸಿಬ್ಬಂದಿಗಳ ಶೋಷನೆಯನ್ನು ನಿಲ್ಲಿಸಿ ಇತರ ಇಲಾಖೆಗಳಲ್ಲಿರುವಂತೆ ಜೀವಭದ್ರತೆ, ಕನಿಷ್ಠ ವೇತನ ಯೋಜನೆಯನ್ನು ತಿಂಗಳೊಳಗೆ ನೀಡುವಂತೆ ಡಿಎಚ್‌ಓಗೆ ಸೂಚನೆ ನೀಡಲಾಗಿದೆ.
-ಯುಟಿ ಖಾದರ್, ಆರೋಗ್ಯ ಸಚೀವರು
------------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net