ಮಂಗಳೂರು: ಕರ್ಣಾಟಕ ಬ್ಯಾಂಕ್ 2026ರ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ಒಟ್ಟು ವ್ಯವಹಾರವನ್ನು ಸಾರ್ವಕಾಲಿಕ ಗರಿಷ್ಠ 2,07,132.41 ಕೋಟಿ ರೂ.ಹೆಚ್ಚಿಸಿದ್ದು, 435.89 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ 319.12 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ತ್ರೈಮಾಸಿಕದ ಲಾಭದಲ್ಲಿ ಶೇ.36.59ರಷ್ಟು ಏರಿಕೆಯಾಗಿದೆ.
ಮಂಗಳೂರಿನಲ್ಲಿ ಬುಧವಾರ ನಡೆದ ಬ್ಯಾಂಕಿನ ನಿರ್ದೇಶಕ ಮಂಡಳಿ ಸಭೆಯಲ್ಲಿ 2026ರ ಸೆ. 30ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಾಗೂ ಅರ್ಧ ವರ್ಷದ ಹಣಕಾಸು ಫಲಿತಾಂಶಗಳಿಗೆ ಅನುಮೋದನೆ ನೀಡಲಾಯಿತು.
ಬ್ಯಾಂಕಿನ ಒಟ್ಟು ಠೇವಣಿಗಳು ಕಳೆದ ವರ್ಷದ ಸೆಪ್ಟೆಂಬರ್ ಅಂತ್ಯದ 1,02,817.19 ಕೋಟಿ ರೂ.ನಿಂದ ಪ್ರಸಕ್ತ ಸಾಲಿನಲ್ಲಿ 1,15,117.15 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.11.96ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದೆ. ಒಟ್ಟು ಮುಂಗಡ ಸಾಲಗಳು 73,644.15 ಕೋಟಿ ರೂ.ನಿಂದ 92,015.26 ಕೋಟಿ ರೂ.ಗೆ ಹೆಚ್ಚಿದ್ದು, ಶೇ. 24.95ರಷ್ಟು ಬೆಳವಣಿಗೆ ಕಂಡಿವೆ.
ಚಿಲ್ಲರೆ ಅವಧಿ ಠೇವಣಿಗಳು 72,197.32 ಕೋಟಿ ರೂ.ಗೆ ತಲುಪಿವೆ. ಬ್ಯಾಂಕಿನ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆಗಳ ಠೇವಣಿಗಳು 36,605.40 ಕೋಟಿ ರೂ. ಆಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.14.82ರಷ್ಟು ಏರಿಕೆ ಕಂಡಿವೆ.
ಬ್ಯಾಂಕಿನ ನಿವ್ವಳ ಬಡ್ಡಿ ಆದಾಯವು ಕಳೆದ ವರ್ಷದ ಎರಡನೇ ತ್ರೈಮಾಸಿಕದ 728.12 ಕೋಟಿ ರೂ.ನಿಂದ ಪ್ರಸಕ್ತ ತ್ರೈಮಾಸಿಕದಲ್ಲಿ 982.44 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಶೇ.34.93ರಷ್ಟು ಬೆಳವಣಿಗೆಯಾಗಿದೆ. ನಿವ್ವಳ ಬಡ್ಡಿ ಮಾರ್ಜಿನ್ ಶೇ.2.72ರಿಂದ ಶೇ. 3.17ಕ್ಕೆ ಏರಿಕೆಯಾಗಿದ್ದು, 45 ಮೂಲಾಂಶಗಳ ಸುಧಾರಣೆ ದಾಖಲಿಸಿದೆ.
ತ್ರೈಮಾಸಿಕದ ಕಾರ್ಯಾಚರಣಾ ಲಾಭವು 440.04 ಕೋಟಿ ರೂ. ನಿಂದ 602.22 ಕೋಟಿ ರೂ.ಗೆ ಏರಿಕೆಯಾಗಿ ಶೇ.36.86ರಷ್ಟು ಬೆಳವಣಿಗೆ ಕಂಡಿದೆ. ಅರ್ಧ ವರ್ಷದ ನಿವ್ವಳ ಲಾಭವು ಕಳೆದ ವರ್ಷದ 611.52 ಕೋಟಿ ರೂ.ನಿಂದ ಪ್ರಸಕ್ತ ಸಾಲಿನಲ್ಲಿ 854.84 ಕೋಟಿ ರೂ.ಗೆ ಹೆಚ್ಚಿದ್ದು, ಶೇ.39.79ರಷ್ಟು ಏರಿಕೆಯಾಗಿದೆ.
ಬ್ಯಾಂಕಿನ ಆಸ್ತಿ ಗುಣಮಟ್ಟದಲ್ಲಿಯೂ ಸುಧಾರಣೆ ಕಂಡುಬಂದಿದೆ. ಒಟ್ಟು ಅನುತ್ಪಾದಕ ಆಸ್ತಿಗಳ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ಅಂತ್ಯದ ಶೇ.3.33ರಿಂದ ಪ್ರಸಕ್ತ ಸಾಲಿನಲ್ಲಿ ಶೇ.2.27ಕ್ಕೆ ಇಳಿಕೆಯಾಗಿದೆ. ನಿವ್ವಳ ಅನುತ್ಪಾದಕ ಆಸ್ತಿಗಳ ಪ್ರಮಾಣವು ಶೇ. 1.35ರಿಂದ ಶೇ. 0.74ಕ್ಕೆ ಇಳಿದಿದೆ.
ಮರುಪಾವತಿ ಮತ್ತು ವಸೂಲಾತಿ ಕ್ರಮಗಳ ಸುಧಾರಣೆಯನ್ನು ಸೂಚಿಸುವ ಪ್ರಾವಿಷನ್ ಕವರೇಜ್ ಅನುಪಾತ ರೈಟ್-ಆಫ್ ಮಾಡಿದ ಖಾತೆಗಳನ್ನು ಹೊರತುಪಡಿಸಿ, ಶೇ.60.22ರಿಂದ ಶೇ. 68.05ಕ್ಕೆ ಏರಿಕೆಯಾಗಿದೆ.
ಬ್ಯಾಂಕಿನ ಸಾಧನೆ ಕುರಿತು ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಎಸ್. ಭಟ್ ಅವರು, ಬ್ಯಾಂಕಿನ ಒಟ್ಟು ವ್ಯವಹಾರ 2,07,132.41 ಕೋಟಿ ರೂ. ಐತಿಹಾಸಿಕ ಮಟ್ಟ ತಲುಪಿದ್ದು, ನಿವ್ವಳ ಲಾಭ 435.89 ಕೋಟಿ ರೂ. ಆಗಿದೆ. ಸುಸ್ಥಿರ ಬೆಳವಣಿಗೆ, ವಿವೇಕಯುತ ಹಣಕಾಸು ನಿರ್ವಹಣೆ ಮತ್ತು ಗ್ರಾಹಕಕೇಂದ್ರಿತ ಬ್ಯಾಂಕಿಂಗ್ಗೆ ನಾವು ನೀಡುತ್ತಿರುವ ಆದ್ಯತೆಯನ್ನು ಈ ಸಾಧನೆ ಪ್ರತಿಬಿಂಬಿಸುತ್ತದೆ ಎಂದರು.