ಬಿಸಿಲಿನ ಪ್ರಖರತೆ ಹೆಚ್ಚಾಗಿ ತಾಪಮಾನ ಏರಿಕೆ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ವಾತಾವರಣ ಮತ್ತಷ್ಟು ಬಿಸಿಯಾಗುತ್ತಿದೆ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ವಾತಾವರಣ ಮತ್ತಷ್ಟು ಬಿಸಿಯಾಗುತ್ತಿದೆ
Published on
ಮಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ವಾತಾವರಣ ಮತ್ತಷ್ಟು ಬಿಸಿಯಾಗುತ್ತಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಏರಿಕೆಯಾಗುತ್ತಿದ್ದು, ಗುರುವಾರ ಬಿಸಿಲಿನ ಪ್ರಖರತೆ ಹೆಚ್ಚಾಗಿ ಕಂಡುಬಂದಿದೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕರಾವಳಿ ದ.ಕ ಹಾಗೂ ಉಡುಪಿ ಸರಾಸರಿ ಗರಿಷ್ಠ ತಾಪಮಾನ 35.5 ಡಿ.ಸೆಲ್ಸಿಯೆಸ್ ದಾಖಲಾಗಿರುವುದಾಗಿ ತಿಳಿಸಿದೆ. ಜಿಲ್ಲೆಯ ವಿವಿಧ ತಾಲೂಕುಗಳಾದ ಮಂಗಳೂರು ಗರಿಷ್ಠ 36 ಡಿ.ಸೆಲ್ಸಿಯಸ್, ಕನಿಷ್ಠ 25 ಡಿ.ಸೆಲ್ಸಿಯಸ್, ಪುತ್ತೂರು ಗರಿಷ್ಠ 36ಡಿ.ಸೆಲ್ಸಿಯಸ್, ಕನಿಷ್ಠ 24ಡಿ.ಸೆಲ್ಸಿಯಸ್, ಬೆಳ್ತಂಗಡಿಯಲ್ಲಿ ಗರಿಷ್ಠ 35ಡಿ.ಸೆಲ್ಸಿಯಸ್, ಕನಿಷ್ಠ 24ಡಿ.ಸೆಲ್ಸಿಯಸ್, ಸುಳ್ಯ ಗರಿಷ್ಠ 37ಡಿ.ಸೆಲ್ಸಿಯಸ್, ಕನಿಷ್ಠ 24ಡಿ.ಸೆಲ್ಸಿಯಸ್, ಬಂಟ್ವಾಳದಲ್ಲಿ ಗರಿಷ್ಠ 36ಡಿ.ಸೆಲ್ಸಿಯಸ್, ಕನಿಷ್ಠ 25ಡಿ.ಸೆಲ್ಸಿಯಸ್, ಮೂಡುಬಿದ್ರೆ ಗರಿಷ್ಠ 35ಡಿ.ಸೆಲ್ಸಿಯಸ್, ಕನಿಷ್ಠ 24ಡಿ.ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
*ಹೆಚ್ಚು ಬಿಸಿಯ ಅನುಭವ
ಹೆಚ್ಚಿನ ಆರ್ದ್ರತೆಯ ಕಾರಣದಿಂದ ಕರಾವಳಿಯ ಹಲವು ಪ್ರದೇಶಗಳಲ್ಲಿ ತಾಪಮಾನಕ್ಕಿಂತಲೂ ಹೆಚ್ಚು ಬಿಸಿಯ ಅನುಭವವಾಗುತ್ತಿದೆ. ಸಮುದ್ರದ ಸಮೀಪ ಇರುವುದರಿಂದ ಗಾಳಿ ತೇವಾಂಶ ಹೆಚ್ಚಿದ್ದು, ಇದರಿಂದ ಉಷ್ಣತೆ ಹೆಚ್ಚು ಅನುಭವವಾಗುತ್ತದೆ. ಕರಾವಳಿ ಪ್ರದೇಶಗಳಲ್ಲಿ ಮಳೆಯ ಕೊರತೆ, ಮೋಡರಹಿತ ಆಕಾಶ ಮತ್ತು ಭೂಮಿಯ ಮೇಲ್ಮೈ ಹೆಚ್ಚು ಬಿಸಿಯಾಗುವುದು ಪ್ರಮುಖ ಕಾರಣಗಳಾಗಿವೆ. ಜೊತೆಗೆ ಸಮುದ್ರದಿಂದ ಬೀಸುವ ತೇವಗಾಳಿಯ ಪರಿಣಾಮವಾಗಿ ಬಿಸಿ ಹಾಗೂ ಆರ್ದ್ರ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮಾರ್ಚ್ ಕೋನೆ ವಾರದಲ್ಲಿ ಮಳೆ ಸಾಧ್ಯತೆ

ಬಂಗಾಳಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಗಾಳಿಯು ಪ್ರಭಲವಾಗುತ್ತಿದ್ದು, ಮುಂದಿನ ಒಂದು ವಾರದಲ್ಲಿ ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆರಂಭವಾಗುವ ಲಕ್ಷಣಗಳಿವೆ. ಅಲ್ಲಿಯವರೆಗೆ ಕೆಲವು ದಿನ ಕರಾವಳಿ ಕರ್ನಾಟಕದಲ್ಲಿ ಬಿಸಿ ಹಾಗೂ ಆರ್ದ್ರ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಜನರು ಮಧ್ಯಾಹ್ನದ ವೇಳೆ ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ, ಹೆಚ್ಚು ನೀರು ಕುಡಿಯುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ದ.ಕ. ಜಿಲ್ಲೆಯ ಸಾರ್ವಜನಿಕರಿಗೆ ಈ ಕುರಿತು ತುರ್ತು ಸೇವೆಯ ಅಗತ್ಯವಿದ್ದರೆ ಟೋಲ್ ಫ್ರೀ ಸಂಖ್ಯೆ 1077 ಗೆ ಕರೆ ಮಾಡಬಹುದು. ಅಥವಾ ದೂ.ಸಂಖ್ಯೆ 0824- 2442590 ಸಂಪರ್ಕಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net