ರೈಲಿನಲ್ಲಿ ಹಳೇ ಮೊಬೈಲ್‌ಗಳ ಅಕ್ರಮ ಸಾಗಾಟ ಪತ್ತೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 201 ಹಳೇ ಮೊಬೈಲ್ ಗಳನ್ನು ರೈಲ್ವೆ ರಕ್ಷಣಾ ದಳದವರು (ಆರ್ ಪಿ ಎಫ್) ಮಂಗಳೂರು ಜಂಕ್ಷನ್ ನಲ್ಲಿ ವಶಕ್ಕೆ ಪಡೆದಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಣ್ಗಾವಲು ತೀವ್ರಗೊಳಿಸಿರುವ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಆರ್ ಪಿ ಎಫ್ ರೈಲುಗಳ ಮೂಲಕ ನಗದು, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳ ಅಕ್ರಮ ಸಾಗಾಟದ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯ ವೇಳೆ ಸುಮಾರು 10.05 ಲಕ್ಷ ರೂ. ಮೌಲ್ಯದ 201 ಹಳೇ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ.
ಮಾ.9 ರಂದು ಮುಂಜಾನೆ ಸುಮಾರು 3 ಗಂಟೆಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3ರಲ್ಲಿ ಜಾಮ್‌ನಗರ - ತಿರುನಲ್ವೇಲಿ ಜಂಕ್ಷನ್ ಎಕ್ಸ್‌ಪ್ರೆಸ್‌ನಲ್ಲಿ ತಪಾಸಣೆ ನಡೆಸಲಾಯಿತು. ರೈಲಿನ ಜನರಲ್ ಕೋಚ್ ಅನ್ನು ಪರಿಶೀಲಿಸುವಾಗ ಮೇಲಿನ ಲಗೇಜ್ ರಾಕ್‌ನಲ್ಲಿ ಯಾರೂ ಇಲ್ಲದ ಮೂರು ಬ್ಯಾಗ್‌ಗಳಿರುವುದನ್ನು ಗಮನಿಸಲಾಯಿತು. ಅನುಮಾನದ ಮೇಲೆ ಬ್ಯಾಗ್‌ಗಳನ್ನು ಪರೀಕ್ಷಿಸಿದಾಗ ವಿವಿಧ ಬ್ರಾಂಡ್‌ಗಳ 201 ಹಳೆಯ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಆರ್‌ಪಿಎಫ್ ಹೆಡ್ ಕಾನ್‌ಸ್ಟೆಬಲ್ ಸುಜೀಶ್ ಮತ್ತು ಕಾನ್‌ಸ್ಟೆಬಲ್ ರಾಮಕೃಷ್ಣ ಅವರು ತಪಾಸಣೆ ನಡೆಸಿದರು.
ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಬಾಡಿ-ವೋರ್ನ್ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬ್ಯಾಗ್‌ಗಳು ಪತ್ತೆಯಾದ ಸಮಯದಲ್ಲಿ ಕೋಚ್‌ನಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳಿರುವುದು ಕಂಡುಬಂದಿದೆ. ಶಂಕಿತರನ್ನು ಪತ್ತೆಹಚ್ಚಲು ಕ್ರೈಮ್ ಇಂಟೆಲಿಜೆನ್ಸ್ ಬ್ರಾಂಚ್ ಮತ್ತು ವಿಭಾಗೀಯ ಅಪರಾಧ ತಡೆ ಮತ್ತು ಪತ್ತೆ ದಳದ ಸಮನ್ವಯದೊಂದಿಗೆ ಪ್ರಯತ್ನಗಳು ನಡೆಯುತ್ತಿದೆ. ಮುಂದಿನ ತನಿಖೆಗಾಗಿ ಮತ್ತು ವಶಪಡಿಸಿಕೊಂಡ ವಸ್ತುಗಳ ಕುರಿತು ಸೂಕ್ತ ಕಾನೂನು ಕ್ರಮಕ್ಕಾಗಿ ರೈಲ್ವೆ ಪೊಲೀಸ್ ಗೆ ಹಸ್ತಾಂತರಿಸಲಾಗಿದೆ ಎಂದು ಆರ್ ಪಿ ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
* ಕಳವು ಮಾಡಿದ ಮೊಬೈಲ್ ಸಾಧ್ಯತೆ:
ವಶಪಡಿಸಿಕೊಳ್ಳಲಾದ 201 ಮೊಬೈಲ್ ಗಳನ್ನು ಆರೋಪಿಗಳು ರೈಲ್ವೆ ಪ್ರಯಾಣಿಕರಿಂದ ಕಳವು ಮಾಡಿರುವ ಸಾಧ್ಯತೆ ಇದೆ. ಇವು ತುಂಬಾ ಹಳೇ ಮೊಬೈಲ್ ಗಳಲ್ಲ. ಇವುಗಳನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದರೆಂಬ ಸಂದೇಹವಿದೆ. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಆರ್ ಪಿ ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net