ಬಾಂಗ್ಲಾ ಪ್ರಜೆಗೆ ಜಾಮೀನು ಮಂಜೂರು| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಪಾಸ್​ಪೋರ್ಟ್​ ಬಳಸಿ ವಿದೇಶ ಪ್ರಯಾಣ ಯತ್ನ
ಬೆಂಗಳೂರು: ನಕಲಿ ಆಧಾರ್​ ಕಾರ್ಡ್​ ಬಳಸಿ ಪಡೆದ ಭಾರತೀಯ ಪಾಸ್​ಪೋರ್ಟ್​ ಮೂಲಕ ಮಂಗಳೂರು ವಿಮಾನ ನಿಲ್ದಾಣದಿಂದ ವಿದೇಶಕ್ಕೆ ತೆರಳಲು ಪ್ರಯತ್ನಿಸಿ ಬಂಧನಕ್ಕೊಳಗಾಗಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬನಿಗೆ ಹೈಕೋರ್ಟ್​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಬಾಂಗ್ಲಾದೇಶ ಮೂಲಕ ಮಹಮ್ಮದ್​ ಮಾಣಿಕ್​ ಹುಸೇನ್​ ಎಂಬಾತ ನಕಲಿ ಆಧಾರ್​ ಕಾರ್ಡ್​ ಬಳಸಿ ಭಾರತೀಯ ಪಾಸ್​ಪೋರ್ಟ್​ ಪಡೆದಿದ್ದ. ದುಬೈಗೆ ಪ್ರಯಾಣಿಸಲು ಯತ್ನಿಸಿದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು 2024ರ ಅಕ್ಟೋಬರ್​ನಲ್ಲಿ ಬಂಧಿಸಿದ್ದರು. ಪ್ರಕರಣದಲ್ಲಿ ಚಾರ್ಜ್​ಶೀಟ್​ ಸಲ್ಲಿಕೆಯಾಗಿರುವುದರಿಂದ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಶಿವಶಂಕರ್​ ಅಮರಣ್ಣನವರ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದೆ. 1 ಲಕ್ಷ ರೂ. ಮೌಲ್ಯದ ಬಾಂಡ್​, ಅಷ್ಟೇ ಮೊತ್ತಕ್ಕೆ ಇಬ್ಬರಿಂದ ಶ್ಯೂರಿಟಿ, ವಾರಕೊಮ್ಮೆ ಪೊಲೀಸ್​ ಠಾಣೆಗೆ ಹಾಜರಾಗಬೇಕು, ವಿಚಾರಣಾ ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗಬೇಕು ಮತ್ತು ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಹುಸೇನ್​ ಪರ ವಾದಿಸಿದ್ದ ವಕೀಲರು, ಅರ್ಜಿದಾರರ ಮೇಲೆ ಗರಿಷ್ಠ 8 ವರ್ಷ ಜೈಲು ಶಿಕ್ಷೆ ಮಾತ್ರ ವಿಧಿಸಬಹುದಾದ  ಆರೋಪವಿದೆ. ಈ ಪ್ರಕರಣದಲ್ಲಿ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ಆದ್ದರಿಂದ ಬಂಧನದ ಅಗತ್ಯವಿಲ್ಲ. ಅಲ್ಲದೆ, ಆರೋಪಿಗೆ ಕನ್ನಡ ಭಾಷೆಯ ಜ್ಞಾನವಿಲ್ಲ ಮತ್ತು ಬಂಧನಕ್ಕೆ ಸೂಕ್ತ ಕಾರಣಗಳನ್ನು ಆರೋಪಿಗೆ ತಿಳಿಸಿಲ್ಲ ಎಂದು ವಾದಿಸಿದ್ದರು.
ಪ್ರಾಸಿಕ್ಯೂಷನ್​ ಪರ ವಾದಿಸಿದ್ದ ವಕೀಲರು, ಆರೋಪಿ ವಿದೇಶಿ ಪ್ರಜೆಯಾಗಿರುವುದರಿಂದ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆಯಿದೆ ಎಂದು ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆರೋಪಿ ಪರ ವಕೀಲರು, ಪಾಸ್​ಪೋರ್ಟ್​ ವಶಪಡಿಸಿಕೊಂಡಿರುವುದರಿಂದ ವಿದೇಶಕ್ಕೆ ಪರಾರಿಯಾಗುವ ಅಪಾಯವಿಲ್ಲ ಎಂದು ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net