

ಬಂಟ್ವಾಳ: ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ಲಾರಿಗಳಿಗೆ ಅಕ್ರಮವಾಗಿ ಮರಳು ತುಂಬುತ್ತಿದ್ದ ಆರೋಪದಡಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಮರಳು ತುಂಬಿದ್ದ 3 ಟಿಪ್ಪರ್ ಲಾರಿ, ಒಂದು ಜೆಸಿಬಿ, ಮರಳು ತುಂಬಲು ಬಳಸುತ್ತಿದ್ದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ಮುಂಜಾನೆ ನದಿ ಕಿನಾರೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಲಾರಿಗಳಲ್ಲಿ ತುಂಬಿಸುತ್ತಿರುವುದಾಗಿ ಬಂಟ್ವಾಳ ಗ್ರಾಮಾಂತರ ಠಾಣೆ ಉಪನಿರೀಕ್ಷಕ ರನ್ನಗೌಡ ಪಾಟೀಲ ಅವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದರು. ಅಲ್ಲಿ ಜೆಸಿಬಿ ಮೂಲಕ ಅಕ್ರಮವಾಗಿ ಲಾರಿಗಳಿಗೆ ಮರಳು ತುಂಬಿರುವುದು ಕಂಡು ಬಂದಿದೆ.
ಸ್ಥಳದಲ್ಲಿದ್ದ 4 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು ಸೊತ್ತಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅವುಗಳ ಮೌಲ್ಯ 25,24,700 ರೂ. ಎಂದು ಅಂದಾಜಿಸಲಾಗಿದೆ. ನಿಹಾನ್, ರಾಜೀಕ್, ಮೊಹಮ್ಮದ್ ಶಂಶೀರ್, ಮಹಮ್ಮದ್ ಅಶ್ರಫ್, ಸ್ಟೀವನ್ ಡಿಸೋಜ ಹಾಗೂ ಕೃತ್ಯಕ್ಕೆ ಸಹಕರಿಸಿದ ರೈಟರ್ ಶಿವಪ್ರಸಾದ್ ಆಳ್ವ ಮತ್ತು ಇತರರು ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.