ಗುರುಪುರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಧರ್ಮಸ್ಥಳ ಮೂಲದ, ನಗರದ ಜಪ್ಪಿನಮೊಗರು ಬಳಿ ವಾಸವಿದ್ದ ಗೋಪಾಲ ಕೃಷ್ಣ (27) ಘಟನೆಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಗೋಪಾಲಕೃಷ್ಣ ಅವರು ಶನಿವಾರ ರಾತ್ರಿ ಕೆಲಸ ಮುಗಿಸಿ ಬೈಕ್ ನಲ್ಲಿ ಜಪ್ಪಿನಮೊಗರು ಕಡೆಗೆ ತೆರಳುತ್ತಿದ್ದಾಗ, ತಾರಾಯಿತೋಟ ಎಂಬಲ್ಲಿ ರಸ್ತೆಯ ಎಡಭಾಗದಲ್ಲಿ ಸಾಗುತ್ತಿದ್ದ ಮೋಹನ್ ಅವರ ಸ್ಕೂಟರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಅವರ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾರೆ. ಇದರಿಂದ ನಿಯಂತ್ರಣ ಕಳೆದುಕೊಂಡು ವೇಗವಾಗಿ ಮುಂದಕ್ಕೆ ಸಾಗಿ ಬಲಭಾಗದಲ್ಲಿ ಸಾಗುತ್ತಿದ್ದ ಟಿಪ್ಪರ್ ಗೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಲ್ಲಿ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೋಹನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನಾಗುರಿ ನಿವಾಸಿಯಾಗಿದ್ದ ಮೋಹನ್ ಅವರು ಪದವಿನಂಗಡಿಯಲ್ಲಿ ಸ್ವಂತ ಸ್ಟುಡಿಯೋ ಹೊಂದಿದ್ದರು. ಮೇ 10ರಂದು ಹಿರಿಯ ಪುತ್ರಿಗೆ ವಿವಾಹ ನಿಶ್ಚಯವಾಗಿತ್ತು. ಸಂಭ್ರಮವಿರಬೇಕಾಗಿದ್ದ ಮನೆಯಲ್ಲಿ ಸೂತಕದ ಛಾಯ ಮೂಡಿದೆ. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನ ಸದಸ್ಯರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.