ಡಿಜಿಟಲ್ ಅರೆಸ್ಟ್ 2.07 ಕೋಟಿ ರೂ. ವಂಚನೆಗೊಳಗಾದ ಹಿರಿಯ ನಾಗರಿಕ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಿರಿಯ ನಾಗರಿಕರೊಬ್ಬರಿಗೆ 2.07 ಕೋ.ರೂ.ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಮಾ.31ರಂದು 61 ವರ್ಷ ಪ್ರಾಯದ ದೂರುದಾರರ ಮೊಬೈಲ್ ಗೆ ಸಾಮಾನ್ಯ ಕರೆಯೊಂದು ಬಂದಿದೆ. ಕರೆ ಮಾಡಿದ ವ್ಯಕ್ತಿ ನ್ಯಾಷನಲ್ ಡಾಟಾ ಪ್ರೊಟೆಕ್ಷನ್ ಸೆಂಟರ್ ನ ಅಧಿಕಾರಿ ಎಂದು ಆಂಗ್ಲಭಾಷೆಯಲ್ಲಿ ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಗುರುತಿನ ಚೀಟಿ ಬಳಸಿಕೊಂಡು ಮುಂಬಯಿ ಮೂಲದ ವ್ಯಕ್ತಿಯೊಬ್ಬ ಸಿಮ್ ಖರೀದಿಸಿ ಮುಂಬಯಿನ ಸಾರ್ವಜನಿಕರಿಗೆ ಬೆದರಿಕೆ ಕರೆ ಮಾಡಿದ್ದಾನೆ. ಜತೆಗೆ ಅಶ್ಲೀಲ ಫೋಟೊ, ವಿಡಿಯೋಗಳನ್ನು ಕಳುಹಿಸುತ್ತಿದ್ದಾನೆ. ಮಾದಕ ವಸ್ತು ಮಾರಾಟ ಮಾಡಲೂ ಅದೇ ಸಿಮ್ ಬಳಸುತ್ತಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಕೊಲಾಬ ಪೊಲೀಸ್ ಠಾಣೆಯಲ್ಲಿ 30-50 ಎಫ್ ಐ ಆರ್ ದಾಖಲಾಗಿದೆ. ಇದರಿಂದ ಕ್ಲಿಯರೆನ್ಸ್ ನೀಡಲು ಎನ್‌ಐಎ ಮತ್ತು ಇಡಿ ಅಧಿಕಾರಿಗಳು ಕರೆ ಮಾಡಿ ಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾನೆ.
ಇದನ್ನು ದೂರುದಾರರು ನಂಬಿದ್ದಾರೆ. ಅನಂತರ ವಾಟ್ಸ್‌ಪ್ ಗೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಎನ್‌ಐಎ ಅಧಿಕಾರಿ ಸಂದೀಪ್ ರಾವ್ ಎಂದು ತಿಳಿಸಿದ್ದಾನೆ. ಎಡಿಜಿಪಿ ಮ್ಯಾಥ್ಯೂ ಅವರು ತಿಳಿಸಿದಂತೆ ನಿಮ್ಮ ಬಯೋಡಾಟಾ ಬೇಕು ಎಂದು ಕೇಳಿ ತೆಗೆದುಕೊಂಡಿದ್ದಾನೆ. ಅನಂತರ ಇಡಿ ಅಧಿಕಾರಿ ವಿಲಾಸ್ ರಾವ್ ಪಟೇಲ್ ಜತೆ ಮಾತನಾಡುವಂತೆ ತಿಳಿಸಿದ್ದಾನೆ.
ಆತನ ಜತೆ ಮಾತನಾಡಿದಾಗ, ನಮ್ಮ ದಾಖಲೆಗಳ ಪ್ರಕಾರ ನೀವು ದೊಡ್ಡ ಕ್ರಿಮಿನಲ್. ನಿಮ್ಮ ಮೇಲೆ ಅನೇಕ ಕೇಸ್ ಗಳು ದಾಖಲಾಗಿದ್ದು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ ಎಂದು ಬೆದರಿಸಿದ್ದಾನೆ. ಬಳಿಕ ಹಂತ ಹಂತವಾಗಿ ಎ.7ರಿಂದ 18ರ ವರೆಗೆ ಒಟ್ಟು 2,07,04,600 ರೂ.ವನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಆರ್ ಟಿಜಿಎಸ್ ಮಾಡಿಸಿಕೊಂಡಿದ್ದಾನೆ. ಈ ವಿಚಾರವನ್ನು ಇತರರಿಗೆ ತಿಳಿಸಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ.
ಯಾರೋ ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆನ್ ಲೈನ್ ಮೂಲಕ 2,07,04,600 ರೂ ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ. ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net