ಕರಾವಳಿಯಲ್ಲಿ ಮೋಡ ಕವಿದ ವಾತಾವರಣ

ಕರಾವಳಿಯಲ್ಲಿ ಮೋಡ ಕವಿದ ವಾತಾವರಣ
ಕರಾವಳಿಯಲ್ಲಿ ಮೋಡ ಕವಿದ ವಾತಾವರಣ
Published on
ಮಂಗಳೂರು: ದ.ಕ ಜಿಲ್ಲೆಯಲ್ಲಿ ಬುಧವಾರ ಸಾಮಾನ್ಯವಾಗಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದಿತು. ಕೆಲ ಭಾಗಗಳಲ್ಲಿ ಮಧ್ಯಮ ಉಷ್ಣಾಂಶದೊಂದಿಗೆ ತೇವಾಂಶ ಹೆಚ್ಚಾಗಿ ಅನುಭವವಾಗಿದ್ದು, ಕರಾವಳಿ ಪ್ರದೇಶಗಳಲ್ಲಿ ಬಿಸಿಗಾಳಿ ಹಾಗೂ ಆರ್ದ್ರತೆ ಜನರಿಗೆ ಅಸಹನೀಯತೆಯನ್ನುಂಟು ಮಾಡಿತು. ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿನಪೂರ್ತಿ ಮೋಡ ಕವಿದ ವಾತಾವರಣ ಇದ್ದರೂ, ಮಳೆಯ ಪ್ರಮಾಣ ಅಲ್ಪವಾಗಿತ್ತು.
ಗುರುವಾರಕ್ಕೆ ಹವಾಮಾನದಲ್ಲಿ ಸ್ವಲ್ಪ ಬದಲಾವಣೆಯ ಸೂಚನೆ ಇದೆ. ಐಎಂಡಿ ಮಾಹಿತಿಯಂತೆ, ಕರಾವಳಿ ಕರ್ನಾಟಕ ಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕೆಲವು ಕಡೆಗಳಲ್ಲಿ ಸಿಡಿಲು-ಗುಡುಗು ಸಹಿತ ತುಂತುರು ಅಥವಾ ಲಘು ಮಳೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಸ್ಥಳೀಯ ಮೋಡಗಳ ವಿಕಸನದಿಂದ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೀನುಗಾರರು ಹಾಗೂ ಸಮುದ್ರತೀರದ ನಿವಾಸಿಗಳು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಚಟುವಟಿಕೆ ನಿಧಾನವಾಗಿ ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ತಾಪಮಾನದಲ್ಲಿ ಸ್ವಲ್ಪ ಇಳಿಕೆ ಕಂಡುಬರುವ ನಿರೀಕ್ಷೆಯಿದೆ.

ಸರಾಸರಿ ಗರಿಷ್ಠ ತಾಪಮಾನ

ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕರಾವಳಿ ದ.ಕ ಹಾಗೂ ಉಡುಪಿ ಸರಾಸರಿ ಗರಿಷ್ಠ ತಾಪಮಾನ 33.5 ಡಿ.ಸೆಲ್ಸಿಯೆಸ್ ದಾಖಲಾಗಿರುವುದಾಗಿ ತಿಳಿಸಿದೆ. ಜಿಲ್ಲೆಯ ವಿವಿಧ ತಾಲೂಕುಗಳಾದ ಮಂಗಳೂರು ಗರಿಷ್ಠ 35 ಡಿ.ಸೆಲ್ಸಿಯಸ್, ಕನಿಷ್ಠ 24ಡಿ.ಸೆಲ್ಸಿಯಸ್, ಪುತ್ತೂರು ಗರಿಷ್ಠ 33ಡಿ.ಸೆಲ್ಸಿಯಸ್, ಕನಿಷ್ಠ 24ಡಿ.ಸೆಲ್ಸಿಯಸ್, ಬೆಳ್ತಂಗಡಿಯಲ್ಲಿ ಗರಿಷ್ಠ 32ಡಿ.ಸೆಲ್ಸಿಯಸ್, ಕನಿಷ್ಠ 23 ಡಿ.ಸೆಲ್ಸಿಯಸ್, ಸುಳ್ಯ ಗರಿಷ್ಠ 34ಡಿ.ಸೆಲ್ಸಿಯಸ್, ಕನಿಷ್ಠ 22ಡಿ.ಸೆಲ್ಸಿಯಸ್, ಬಂಟ್ವಾಳದಲ್ಲಿ ಗರಿಷ್ಠ 33.7ಡಿ.ಸೆಲ್ಸಿಯಸ್, ಕನಿಷ್ಠ 23ಡಿ.ಸೆಲ್ಸಿಯಸ್, ಮೂಡುಬಿದ್ರೆ ಗರಿಷ್ಠ 35ಡಿ.ಸೆಲ್ಸಿಯಸ್, ಕನಿಷ್ಠ 24ಡಿ.ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ

ಕಾಸರಗೋಡು, ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಆದರೆ ಕರಾವಳಿ ತೀರ ಭಾಗಗಳಲ್ಲಿ ಸಂಜೆ ಕಡಿಮೆ ಇದ್ದರೆ ಬೆಳಗ್ಗೆ ಮಳೆಯಾಗುವ ಸಾಧ್ಯತೆಗಳಿವೆ. ಗಾಳಿಯ ಬೀಸುವಿಕೆಯು ಅತಿ ನಿಧಾನ ಗತಿಯಲ್ಲಿ ಹಾಗೂ ನಿರ್ದಿಷ್ಟ ದಿಕ್ಕು ಇಲ್ಲದ ಕಾರಣ ಕೆಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಕರಾವಳಿಯಲ್ಲಿ ದಿನವಿಡಿ ಬಿಸಿ ವಾತಾವರಣ ಮಾ. 20ರ ತನಕ ಮುಂದುವರಿಯುವ ಲಕ್ಷಣಗಳಿದ್ದು, ನಂತರ ಮಾ.25 ಅಥವಾ 27ರ ತನಕ ಕರಾವಳಿಯ ಜಿಲ್ಲೆಗಳಲ್ಲಿ ಮತ್ತು ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ ಎಂದು ಐಎಂಡಿ ಮಾಹಿತಿ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net