ಜೈಲಿನ 30 ಎಕರೆಗಳಷ್ಟು ಪ್ರದೇಶ ಬಳಸಿ ಕೃಷಿ, ಪಶುಸಂಗೋಪನೆ, ಕೋಳಿ ಸಾಕಣೆ, ಮೀನು ಸಾಕಣೆ ನಡೆಸಲಾಗುತ್ತಿದ್ದು, ಜೈಲು ಪ್ರವಾಸಿ ಕೇಂದ್ರವಾಗುವ ದಿನ ದೂರವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೈಲಿನ ಆವರಣದ ವಿಶಾಲವಾದ ಪ್ರದೇಶದಲ್ಲಿ ಕೈದಿಗಳು ಕೃಷಿ ಮಾಡುತ್ತಿದ್ದು, ಇದುವರೆಗೆ ತರಕಾರಿಯಿಂದಲೇ 1.25 ಕೋಟಿ ರೂ. ಆದಾಯ ಪಡೆಯಲಾಗಿದೆ. ಜೈಲಿನ ಅವಶ್ಯಕತೆ ಬಳಿಕ ಉಳಿದ ತರಕಾರಿಗಳನ್ನು ಕೆಫೆ ಮೂಲಕ ಮಾರಾಟ ಮಾಡಲಾಗುತ್ತದೆ. ಈ ತರಕಾರಿಗಳನ್ನು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಉಪಯೋಗಿಸದೆ ಬೆಳೆಸಲಾಗುತ್ತಿದೆ. ತರಕಾರಿಗಳು ಮಾತ್ರವಲ್ಲದೆ ಬಾಳೆ ಹಾಗೂ ಗೆಣಸು ಕೃಷಿ ಮಾಡಲಾಗುತ್ತಿದೆ. ಹಸು, ಕೋಳಿ, ಆಡುಗಳ ಫಾರ್ಮ್ ಇದ್ದು, ಇವುಗಳ ಗೊಬ್ಬರವನ್ನೇ ಕೃಷಿಗೆ ಉಪಯೋಗಿಸಲಾಗುತ್ತದೆ. ಪ್ರಸ್ತುತ ಇಲ್ಲಿ 200 ಮಂದಿ ಕೈದಿಗಳಿದ್ದಾರೆ.