ನವೆಂಬರ್ 14ರಿಂದ 16ರ ತನಕ ಮಂಗಳೂರಿನಲ್ಲಿ ಕಾಜು ಶತಮಾನೋತ್ಸವ ಸಮ್ಮೇಳನ

‘ಕಾಜು ಶತಮಾನೋತ್ಸವ ಸಮ್ಮೇಳನದ ಬಗ್ಗೆ ಕೆಸಿಎಂಎ ಅಧ್ಯಕ್ಷ ಎ.ಕೆ. ರಾವ್ ಮಾಹಿತಿ ನೀಡಿದರು. ಪ್ರಕಾಶ್ ಕಲ್ಬಾವಿ, ತುಕರಾಮ ಪ್ರಭು,  ಗಣೇಶ್ ಕಾಮತ್ ಹಾಗೂ ಸುಬ್ರಾಯ ಪೈ ಉಪಸ್ಥಿತರಿದ್ದರು.
‘ಕಾಜು ಶತಮಾನೋತ್ಸವ ಸಮ್ಮೇಳನದ ಬಗ್ಗೆ ಕೆಸಿಎಂಎ ಅಧ್ಯಕ್ಷ ಎ.ಕೆ. ರಾವ್ ಮಾಹಿತಿ ನೀಡಿದರು. ಪ್ರಕಾಶ್ ಕಲ್ಬಾವಿ, ತುಕರಾಮ ಪ್ರಭು, ಗಣೇಶ್ ಕಾಮತ್ ಹಾಗೂ ಸುಬ್ರಾಯ ಪೈ ಉಪಸ್ಥಿತರಿದ್ದರು.
Published on

ಮಂಗಳೂರು: ಕರ್ನಾಟಕ ಗೋಡಂಬಿ ತಯಾರಕರ ಸಂಘ (ಕೆಸಿಎಂಎ) ವತಿಯಿಂದ ‘ಕಾಜು ಶತಮಾನೋತ್ಸವ ಸಮ್ಮೇಳನ -2025’ ನಗರದ ಡಾ.ಟಿ.ಎಂ.ಎ.ಪೈ ಕನ್ವೆಷನ್ ಸೆಂಟರ್‌ನಲ್ಲಿ ನ.14ರಿಂದ 16 ರ ತನಕ ನಡೆಯಲಿದೆ ಎಂದು ಕೆಸಿಎಂಎ ಅಧ್ಯಕ್ಷ ಎ.ಕೆ. ರಾವ್ ಹೇಳಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಗೋಡಂಬಿ ಕಾರ್ಖಾನೆಯನ್ನು 1925ರಲ್ಲಿ ಮಂಗಳೂರಿನಲ್ಲಿ ಬ್ರಿಟಿಷ್ ಕಂಪನಿ ಪಿಯರ್ಸ್ ಲೆಸ್ಲಿ ಇಂಡಿಯಾ ಲಿಮಿಟೆಡ್ ಸ್ಥಾಪಿಸಿತ್ತು. ಭಾರತದ ಸಂಘಟಿತ ಗೋಡಂಬಿ ಉದ್ಯಮದ ಜನ್ಮಸ್ಥಳವಾದ ಮಂಗಳೂರಿನಲ್ಲಿ ಗೋಡಂಬಿ ಸಂಸ್ಕರಣೆಯ 100 ವರ್ಷಗಳ ಸ್ಮರಣಾರ್ಥ ಮೂರು ದಿನಗಳ ಬಹುದೊಡ್ಡ ಕಾರ್ಯಕ್ರಮವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ನ.14ರಂದು ಸಂಜೆ 4ಕ್ಕೆ ಉದ್ಘಾಟನೆ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಕಾರ್ಮಿಕ, ಉದ್ಯೋಗ ಮತ್ತು ಎಂಎಸ್‌ಎಂಇ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಶಾಸಕ ಡಿ.ವೇದವ್ಯಾಸ್ ಕಾಮತ್, ಎನ್‌ಎಂಪಿಎ ಅಧ್ಯಕ್ಷ ಡಾ.ವೆಂಕಟ್ ರಮಣ ಅಕ್ಕರಾಜು, ಅಂತಾರಾಷ್ಟ್ರೀಯ ನಟ್ ಕೌನ್ಸಿಲ್‌ನ ಅಧ್ಯಕ್ಷ ಅಶೋಕ್ ಕ್ರಿಶನ್, ಇಟಿಜಿ ಗ್ರೂಪ್‌ನ ಕಾರ‌್ಯನಿರ್ವಾಹಕ ನಿರ್ದೇಶಕ ವಾಸುದೇವ ಬಾರ್ಕೂರು ಹಾಗೂ ಓಲಂ ಇಂಟರ್‌ನ್ಯಾಶನಲ್‌ನ ಮಾಜಿ ಉಪಾಧ್ಯಕ್ಷ ರೆಬೆ ಗೌಡ್ರಿಯನ್ ಮೊದಲಾದವರು ಭಾಗವಹಿಲಿದ್ದಾರೆ. ನ.15ರಂದು ಗೋಂಡಬಿ ವಿಚಾರದಲ್ಲಿ ಚರ್ಚಾಗೋಷ್ಠಿ, ಸಂವಾದ, ಮಾರುಕಟ್ಟೆ ವಿಚಾರದಲ್ಲಿ ತಜ್ಞರಿಂದ ವಿಶ್ಲೇಷಣೆ ನಡೆಯಲಿದ್ದು, ನ.16ರಂದು ಬೆಳಗ್ಗೆ 11ಕ್ಕೆ ಸಮಾರೋಪ ನಡೆಯಲಿದೆ. ಈ ಸಂದರ್ಭ ‘ವೃಕ್ಷ ರಕ್ಷಾ ವಿಶ್ವ ರಕ್ಷಾ’ ಎನ್ನುವ ಅಭಿಯಾನ ಕೂಡ ನಡೆಯಲಿದೆ. ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 120 ಕ್ಕೂ ಹೆಚ್ಚು ಮಳಿಗೆಗಳು ಸಮ್ಮೇಳನದಲ್ಲಿ ಇರಲಿವೆ. ಅತ್ಯಾಧುನಿಕ ಗೋಡಂಬಿ ಸಂಸ್ಕರಣಾ ತಂತ್ರಜ್ಞಾನ, ಭಾರತ ಮತ್ತು ವಿಯೆಟ್ನಾಂನ ಯಂತ್ರೋಪಕರಣಗಳು ಮತ್ತು ನವೀನ ಉತ್ಪನ್ನ ಮಾರ್ಗಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು.

ಕೆಸಿಎಂಎ ಉಪಾಧ್ಯಕ್ಷ ತುಕರಾಮ ಪ್ರಭು, ಖಜಾಂಚಿ ಗಣೇಶ್ ಕಾಮತ್ ಹಾಗೂ ಸುಬ್ರಾಯ ಪೈ ಉಪಸ್ಥಿತರಿದ್ದರು.

ಕರ್ನಾಟಕ ಕಚ್ಚಾ ಗೇರು ಬೀಜದ ಹಬ್

ಕರ್ನಾಟಕವು ವಿಯೆಟ್ನಾಂ, ಆಫ್ರಿಕಾ ದೇಶಗಳಿಂದ ಎನ್‌ಎಂಪಿಎ ಮೂಲಕ ಕಚ್ಚಾ ಗೋಡಂಬಿಯನ್ನು ಆಮದು ಮಾಡುವಲ್ಲಿ ಪ್ರಮುಖ ಸ್ಥಾನದಲ್ಲಿದೆ. ಹಾಗಾಗಿ ಕಚ್ಚಾ ಗೇರುಬೀಜವನ್ನು ಮಂಗಳೂರಿನಲ್ಲಿ ಸಂಗ್ರಹಿಸಿ ರಾಜ್ಯ ಹಾಗೂ ದೇಶದ ವಿವಿಧ ಕಡೆಗೆ ಸಾಗಿಸಲಾಗುತ್ತಿದೆ. ಮೌಲ್ಯವರ್ಧಿತ ಉತ್ಪನ್ನಗಳಿಗೆ ಹೊರ ದೇಶಗಳಿಂದ ಮಾತ್ರವಲ್ಲದೆ, ದೇಶೀಯವಾಗಿಯೂ ಉತ್ತಮ ಬೇಡಿಕೆ ಇದೆ ಎಂದು ಎ.ಕೆ.ರಾವ್ ಹೇಳಿದರು.

"

ಮಂಗಳೂರಿನ ಗೋಡಂಬಿ ಈಗ ಗುಣಮಟ್ಟದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿದೆ. ನಮ್ಮ ಉತ್ಪಾದಗೆ ದೇಶದಲ್ಲೇ ಸಾಕಷ್ಟು ಬೇಡಿಕೆ ಇರುವುದರಿಂದ ರಫ್ತು ಮಾಡಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಿಸಿ ರಫ್ತು ಮಾಡಲು ಆದ್ಯತೆ ವಹಿಸಲಾಗುವುದು.

ಪ್ರಕಾಶ್ ಕಲ್ಬಾವಿ, ಸಂಚಾಲಕರು, ಕಾಜು ಶತಮಾನೋತ್ಸವ ಸಮಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net