ಅಭಿವೃದ್ಧಿ ಕಾಣದ ಬೇಕಲ ನಿಲ್ದಾಣ

ಸೂಪರ್‌ಫಾಸ್ಟ್ ರೈಲುಗಳಿಗೆ ನಿಲುಗಡೆ ಇಲ್ಲದೆ ಪ್ರವಾಸಿಗರಿಗೆ ಸಂಕಷ್ಟ
ಬೇಕಲ ಕೋಟೆ ರೈಲು ನಿಲ್ದಾಣ
ಬೇಕಲ ಕೋಟೆ ರೈಲು ನಿಲ್ದಾಣ
Published on

ವಿಜಯವಾಣಿ ಸುದ್ದಿಜಾಲ ಕುಂಬಳೆ

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ತನ್ನದೇ ಆದ ವಿಶೇಷ ಗುರುತು ಮೂಡಿಸಿರುವ ಪ್ರಸಿದ್ಧ ಬೇಕಲ ಕೋಟೆ ಪ್ರದೇಶದ ರೈಲು ನಿಲ್ದಾಣ ಅಭಿವೃದ್ಧಿ ಕಾಣದೆ ತೀವ್ರ ನಿರ್ಲಕ್ಷೃಕ್ಕೆ ಒಳಗಾಗಿದೆ. ಪ್ರತಿದಿನ 500ಕ್ಕೂ ಹೆಚ್ಚು ಪ್ರವಾಸಿಗರು ಹಾಗೂ ಪ್ರಯಾಣಿಕರು ಭೇಟಿ ನೀಡುವ ಈ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ.

ಪ್ರಸ್ತುತ ಮಂಗಳೂರು ಮತ್ತು ದಕ್ಷಿಣದತ್ತ ಸಂಚರಿಸುವ ಕೇವಲ 10 ರೈಲುಗಳಿಗೆ ಮಾತ್ರ ಇಲ್ಲಿ ನಿಲುಗಡೆ ನೀಡಲಾಗಿದೆ. ಬೆಳಗ್ಗೆ ಮತ್ತು ಸಂಜೆ ಮಲಬಾರ್ ಎಕ್ಸ್‌ಪ್ರೆಸ್, ಮಂಗಳೂರು ಎಕ್ಸ್‌ಪ್ರೆಸ್, ಚೆನ್ನೈ ಎಗ್ಮೋರ್-ಮಂಗಳೂರು ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್- ಕೋಝಿಕ್ಕೋಡ್-ಪಾಲಕ್ಕಾಡ್ ಎಕ್ಸ್‌ಪ್ರೆಸ್, ಚೆರ್ವತ್ತೂರು-ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ಹಾಗೂ ಕಣ್ಣೂರು- ಮಂಗಳೂರು ಪ್ಯಾಸೆಂಜರ್ ರೈಲುಗಳಿಗೆ ಮಾತ್ರ ಇಲ್ಲಿ ನಿಲುಗಡೆ ಇದೆ.

ಸುದೀರ್ಘ ಪ್ರಯಾಣದ ರೈಲುಗಳಿಗೆ ನಿಲುಗಡೆ ಇಲ್ಲ: ಬೇಕಲಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ದೂರದೂರುಗಳ ಎಕ್ಸ್‌ಪ್ರೆಸ್ ಹಾಗೂ ಸೂಪರ್‌ಫಾಸ್ಟ್ ರೈಲುಗಳಿಗೆ ಇಲ್ಲಿ ನಿಲುಗಡೆ ನೀಡಬೇಕೆಂಬ ಸ್ಥಳೀಯರು ಹಾಗೂ ರಾಜಕೀಯ ನಾಯಕರ ಸುದೀರ್ಘ ಕಾಲದ ಬೇಡಿಕೆಗೆ ರೈಲ್ವೆ ಸಚಿವಾಲಯ ಇನ್ನೂ ಸ್ಪಂದಿಸಿಲ್ಲ.

‘ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವ’ದಂತಹ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಾತ್ರ ಕೆಲವು ಹೆಚ್ಚುವರಿ ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ನೀಡಲಾಗುತ್ತದೆ. ಈ ತಾತ್ಕಾಲಿಕ ನಿಲುಗಡೆಗಳನ್ನು ಶಾಶ್ವತಗೊಳಿಸಿದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಹೆಸರು ಬದಲಾದರೂ ಬದಲಾಗದ ಸ್ಥಿತಿ

ಸುಮಾರು 13 ಎಕರೆ ವಿಸ್ತಾರವಾದ ಭೂಮಿಯಲ್ಲಿ ಎರಡು ಫ್ಲಾೃಟ್‌ಫಾರ್ಮ್‌ಗಳನ್ನು ಹೊಂದಿರುವ ಬೇಕಲ ರೈಲು ನಿಲ್ದಾಣವನ್ನು ಆರಂಭದಲ್ಲಿ ‘ಪಳ್ಳಿಕ್ಕೆರೆ ರೈಲು ನಿಲ್ದಾಣ’ ಎಂದು ಕರೆಯಲಾಗುತ್ತಿತ್ತು. ಬೇಕಲ ಪ್ರದೇಶವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಹೊರಹೊಮ್ಮಿದ ನಂತರ ಇದನ್ನು ‘ಬೇಕಲ ಕೋಟೆ ರೈಲು ನಿಲ್ದಾಣ’ ಎಂದು ಮರುನಾಮಕರಣ ಮಾಡಲಾಯಿತು. ಆದಾಗ್ಯೂ, ಮೂಲಸೌಕರ್ಯಗಳ ಮಿತಿ, ಭೂ ವಿವಾದ ಹಾಗೂ ನ್ಯಾಯಾಲಯದ ತಡೆಯಾಜ್ಞೆಗಳು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದೆ ಎನ್ನುತ್ತಾರ ರೈಲ್ವೆ ಅಧಿಕಾರಿಗಳು.

ಪ್ರವಾಸಿಗರು, ಗಣ್ಯರಿಗೆ ತಾಪತ್ರಯ

ದೇಶ-ವಿದೇಶಗಳಿಂದ ನಿತ್ಯ ನೂರಾರು ಪ್ರವಾಸಿಗರು ಬೇಕಲ ಕೋಟೆಯ ಸೌಂದರ್ಯ ಸವಿಯಲು ಆಗಮಿಸುತ್ತಾರೆ. ಅಲ್ಲದೆ, ಚಲನಚಿತ್ರ ರಂಗದ ಪ್ರಮುಖ ಬರಹಗಾರರು, ನಿರ್ದೇಶಕರು ಹಾಗೂ ನಟ-ನಟಿಯರೂ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಸೂಕ್ತ ರೈಲು ಸೌಲಭ್ಯವಿಲ್ಲದೆ ಇವರೆಲ್ಲರೂ 15 ಕಿ.ಮೀ. ದೂರದಲ್ಲಿರುವ ಕಾಸರಗೋಡು ಅಥವಾ 8 ಕಿ.ಮೀ. ದೂರದಲ್ಲಿರುವ ಕಾಞಂಗಾಡು ರೈಲು ನಿಲ್ದಾಣವನ್ನು ಅವಲಂಬಿಸಬೇಕಿದೆ. ಈ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಬೇರೆ ವಾಹನಗಳ ಮೂಲಕ ಬೇಕಲ ಕೋಟೆಗೆ ಬರಬೇಕಾದ ಸ್ಥಿತಿಯಿದೆ.

ಉತ್ತರ ಕೇರಳದ ಪ್ರಮುಖ ಪ್ರವಾಸಿ ಕೇಂದ್ರವೂ, ಕಾಸರಗೋಡಿನ ಹಿರಿಮೆಯ ಸಂಕೇತವೂ ಆಗಿರುವ ಬೇಕಲ ಕೋಟೆಯ ವೀಕ್ಷಣೆಗಾಗಿ ಆಗಮಿಸುವವರಿಗೆ ಇಲ್ಲಿನ ರೈಲು ನಿಲ್ದಾಣವು ಸೌಲಭ್ಯ ರಹಿತವಾಗಿ ಸವಾಲಾಗಿ ಪರಿಣಮಿಸಿದೆ. ಈ ಕುರಿತು ರೈಲ್ವೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಹೆಚ್ಚಿನ ರೈಲುಗಳ ನಿಲುಗಡೆಗೆ ಅವಕಾಶ ನೀಡಿಲ್ಲ. ಸಂಸದರ ಗಮನಕ್ಕೂ ತರಲಾಗಿದ್ದು, ಸಂಬಂಧಪಟ್ಟವರು ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು.
ಸಿ.ಕೆ.ನಾಝರ್ ಒಡೆಯಂಚ್ಚಾಲ್ ಕಾರ್ಯದರ್ಶಿ, ರೈಲ್ವೆ ಪ್ರೊಟೆಕ್ಷನ್ ಫೋರಂ ಕೇರಳ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net