ಬಿ.ಸಿ.ರೋಡ್ ಈಗ ‘ಬಿಜಿ ರೋಡ್’

ದ್ವಿಪಥ ಫ್ಲೈಓವರ್ ಬೇಡಿಕೆ ಮುನ್ನೆಲೆಗೆ
ಬಿ.ಸಿ.ರೋಡಿನಲ್ಲಿರುವ ಏಕಮುಖ ಸಂಚಾರದ ಫ್ಲೈ ಓವರ್.
ಬಿ.ಸಿ.ರೋಡಿನಲ್ಲಿರುವ ಏಕಮುಖ ಸಂಚಾರದ ಫ್ಲೈ ಓವರ್.
Published on: 

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಪ್ರತಿನಿತ್ಯ ವಾಹನ ದಟ್ಟಣೆಯ ಬಿಸಿ ಅನುಭವಿಸುತ್ತಿರುವ ಬಿ.ಸಿ.ರೋಡು ಸಿಟಿಯಲ್ಲಿ ಸಂಚಾರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಬಿ.ಸಿ.ರೋಡ್‌ನಿಂದ ಕೈಕಂಬದವರೆಗೆ ಹೊಸ ಪ್ಲೈಓವರ್ ನಿರ್ಮಾಣದ ಪ್ರಸ್ತಾವವೊಂದು ಮುನ್ನೆಲೆಗೆ ಬಂದಿದೆ.

ದಿನದಿಂದ ದಿನಕ್ಕೆ ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ದೃಷ್ಟಿಯಿಂದ ಫ್ಲೈಓವರ್‌ಗೆ ಚಿಂತನೆ ನಡೆಸಲಾಗುತ್ತಿದೆ. ಸದ್ಯ ಇರುವ ಪ್ಲೈಓವರ್ ಏಕಮುಖವಾಗಿರುವ ಕಾರಣದಿಂದ ಅದರ ಬದಲು ದ್ವಿಪಥದ ಸುಸಜ್ಜಿತ ಪ್ಲೈಓವರ್ ಇಲ್ಲಿಗೆ ಅತ್ಯಗತ್ಯ ಎಂಬ ಬೇಡಿಕೆ ಕೇಳಿ ಬಂದಿದೆ.

ಸಭೆಯಲ್ಲಿ ಶಾಸಕ ಪ್ರಸ್ತಾಪ

ಬಿ.ಸಿ.ರೋಡ್‌ನ ಪೊಳಲಿ ದ್ವಾರ ಕೈಕಂಬದಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತದವರೆಗೆ ನಿತ್ಯ ಉಂಟಾಗುತ್ತಿರುವ ಸಂಚಾರ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಶಾಸಕ ರಾಜೇಶ್ ನಾಕ್ ಇತ್ತೀಚೆಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವಿಸಿದ್ದರು. ಈ ಮಾರ್ಗದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಪ್ರತಿನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಅಗಲೀಕರಣ ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕಾಗಿದೆ ಎಂಬ ಬೇಡಿಕೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಜಿಲ್ಲಾಧಿಕಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಸಂಬಂಧಿಸಿದ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಶೀಘ್ರ ಜಂಟಿ ಸರ್ವೇ ನಡೆಸಿ, ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ತಿಳಿಸಿದ್ದರು.

ನವ ಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್-ನಂತೂರು-ಬಿ.ಸಿ.ರೋಡ್ ಬಂದರು ಸಂಪರ್ಕ ರಸ್ತೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕಳೆದ ವರ್ಷ ನವೆಂಬರ್‌ನಲ್ಲಿ ಅನುಮೋದನೆ ನೀಡಿದೆ. ಜತೆಗೆ, ಬಿ.ಸಿ.ರೋಡ್‌ನಿಂದ ಸುರತ್ಕಲ್ ಚತುಷ್ಪಥ ಹೆದ್ದಾರಿಯನ್ನು ಷಟ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಹೆದ್ದಾರಿ ಇಲಾಖೆ ಈಗಾಗಲೇ ತೀರ್ಮಾನಿಸಿದೆ.

ಇದರ ಜತೆಗೆ ಬಿ.ಸಿ.ರೋಡ್-ಸುರತ್ಕಲ್ ಮಧ್ಯೆ ಇರುವ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿ 20 ವರ್ಷ ಕಳೆದಿದೆ. ಆರಂಭದಲ್ಲಿ ಸಾಕಷ್ಟು ಅಗಲವಾಗಿ ಕಾಣುತ್ತಿದ್ದ ಹೆದ್ದಾರಿ ಈಗ ವಾಹನಗಳ ಒತ್ತಡದಿಂದಾಗಿ ಕಿರಿದಾದಂತಿದೆ. ಹೀಗಾಗಿ ಹೆದ್ದಾರಿಯನ್ನು 6 ಲೇನ್‌ಗೆ ವಿಸ್ತರಿಸುವ ಹಾಗೂ ಸರ್ವೀಸ್ ರಸ್ತೆ ನಿರ್ಮಿಸುವ ಯೋಜನೆಯನ್ನು ಪ್ರಾಧಿಕಾರ ಹೊಂದಿದೆ. ಇದರ ಡಿಪಿಆರ್ ಪ್ರಕ್ರಿಯೆ ಕೂಡ ಈಗ ಚಾಲನೆ ಹಂತದಲ್ಲಿದೆ.

ಬೆಳಗ್ಗೆ-ಸಂಜೆ ಟ್ರಾಫಿಕ್ ಜಾಮ್

ಮಂಗಳೂರು ಪಡೀಲ್‌ನಿಂದ ಕೈಕಂಬ ಮತ್ತು ಬಿ.ಸಿ.ರೋಡ್‌ನಿಂದ ಅಡ್ಡಹೊಳೆ, ಧರ್ಮಸ್ಥಳ ರಸ್ತೆ ಅಗಲವಾಗಿ ಸಂಚಾರ ಸುಸ್ಥಿತಿಗೆ ಬರುತ್ತಿದ್ದರೂ ಬಿ.ಸಿ.ರೋಡ್‌ನಿಂದ ಕೈಕಂಬದವರೆಗಿನ ರಸ್ತೆ ಮಾತ್ರ ನಿತ್ಯ ಸಂಚಾರ ದಟ್ಟಣೆಯಿಂದ ಪ್ರಯಾಣಿಕರಿಗೆ ಸಂಕಷ್ಟ ತರಿಸುತ್ತಿದೆ. ಇದೇ ರೀತಿ ಸಂಚಾರ ಒತ್ತಡವಿದ್ದರೆ ಮುಂಬರುವ ದಿನದಲ್ಲಿ ಪ್ರಯಾಣ ಮತ್ತಷ್ಟು ಕಷ್ಟವಾಗಲಿದೆ. ಬೆಳಗ್ಗೆ ಹಾಗೂ ಸಂಜೆ ಇಲ್ಲಿ ವಾಹನ ದಟ್ಟಣೆ ಅಧಿಕವಿದೆ. ಅದರಲ್ಲಿಯೂ ಈಗಿನ ಪ್ಲೈಓವರ್ ಕೆಳಭಾಗದಲ್ಲಿ ಸಂಚಾರ ಸಮಸ್ಯೆ ಬಹುವಾಗಿ ಕಾಡುತ್ತಿದೆ.

ಸರ್ವೀಸ್ ರಸ್ತೆಯಲ್ಲಿ ಸಾಗುವ ಅನಿವಾರ್ಯತೆ

ಬಿ.ಸಿ.ರೋಡ್ ಪ್ಲೈಓವರ್ ಏಕಮುಖ ಸಂಚಾರಕ್ಕೆ ಸೀಮಿತವಾದ ಕಾರಣದಿಂದ ಸಂಚಾರ ದಟ್ಟಣೆ ಮುಖ್ಯ ಸಮಸ್ಯೆಯಾಗಿ ಕಾಡುತ್ತಿದೆ. ಮಂಗಳೂರು ಭಾಗದಿಂದ ಬರುವ ಎಲ್ಲ ವಾಹನಗಳು ಹೆದ್ದಾರಿಯಲ್ಲಿ ಬಂದು ಬಿ.ಸಿ.ರೋಡ್‌ನಲ್ಲಿ ಮಾತ್ರ ಪ್ಲೈಓವರ್ ಕೆಳಗಿನ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯತೆ ಉಂಟಾಗಿದೆ. ಹೀಗಾಗಿ ನಿತ್ಯ ಇಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಾಡುತ್ತಿರುತ್ತದೆ. ರಸ್ತೆ ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅಧಿಕವಾಗಿದೆ. ಪಾದಚಾರಿಗಳಿಗೆ ಕಾಲ್ನಡಿಗೆಗೆ ಇಲ್ಲಿ ದಾರಿಯೇ ಇಲ್ಲ ಎಂಬಂತಾಗಿದೆ. ಹಾಗಾಗಿ ದ್ವಿಪಥ ಫ್ಲೈಓವರ್ ನಿರ್ಮಾಣವಾದರೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ನೇರವಾಗಿ ಫ್ಲೈಓವರ್ ಮೇಲೆ ಸಾಗುವುದರಿಂದ ಸರ್ವೀಸ್ ರಸ್ತೆಯಲ್ಲಿ ಒತ್ತಡ ಕಡಿಮೆಯಾಗಲಿದೆ.

ಬಿ.ಸಿ.ರೋಡ್‌ನ ಪೊಳಲಿ ದ್ವಾರವಿರುವ ಕೈಕಂಬದಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತದವರೆಗೆ ನಿತ್ಯ ಉಂಟಾಗುತ್ತಿರುವ ಸಂಚಾರ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ. ನಗರ ಬೆಳೆಯುತ್ತಿರುವ ಕಾರಣದಿಂದ ವಾಹನ ಸಂಚಾರ ಸುಗಮವಾಗುವ ನಿಟ್ಟಿನಲ್ಲಿ ಪರ್ಯಾಯ ಯೋಚನೆಗಳನ್ನು ಮಾಡಬೇಕಾಗಿದೆ. ಈ ಬಗ್ಗೆ ಹೆದ್ದಾರಿ ಇಲಾಖೆಯಿಂದ ಶೀಘ್ರ ಜಂಟಿ ಸರ್ವೇ ನಡೆಯಲಿದೆ. ಇಲ್ಲಿಗೆ ಮೆಲ್ಕಾರ್ ಹಾಗೂ ಕಲ್ಲಡ್ಕದಲ್ಲಿ ಇರುವಂತೆ ಫ್ಲೈಓವರ್ ಮಾಡುವ ಬಗ್ಗೆ ಪ್ರಸ್ತಾಪವನ್ನೂ ಮಂಡಿಸಲಾಗಿದೆ.
ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net