

ಉಪ್ಪಿನಂಗಡಿ: ವಿದ್ಯಾಭಾರತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಶ್ರೀ ಗುರು ಸುಧೀಂದ್ರ ಕಲಾ ಮಂದಿರದಲ್ಲಿ ನಡೆಯಿತು.
ವಿದ್ಯಾಭಾರತಿ ಕ್ಷೇತ್ರೀಯ ನೈತಿಕ, ಆಧ್ಯಾತ್ಮಿಕ ಪ್ರಮುಖರಾಗಿರುವ ವೆಂಕಟರಮಣ ರಾವ್ ಮಂಕುಡೆ ಮಾತನಾಡಿ, ಆತ್ಮರಕ್ಷಣೆ ಕಲೆಯಾದ ಕರಾಟೆ ಎಲ್ಲರೂ ಕಲಿಯಬೇಕಾಗಿದ್ದು, ಕಲೆಯನ್ನು ಪ್ರಕಾಶಿಸುವ ನಿಟ್ಟಿನಲ್ಲಿ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧಾಳುಗಳು ಸೋಲಿಗೆ ಧೃತಿಗೆಡದೆ ಗೆಲುವಿನತ್ತ ನಿರಂತರ ಪ್ರಯತ್ನಿಸುತ್ತಿರಬೇಕೆಂದರು.
ಉದ್ಯಮಿಗಳಾದ ಸಚಿನ್ ಸುಂದರಗೌಡ, ಇಂದ್ರಪ್ರಸ್ಥ ವಿದ್ಯಾಸಂಸ್ಥೆ ಅಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಸುಬ್ರಹ್ಮಣ್ಯ ಭಟ್, ಜಿಲ್ಲಾ ಶಾರೀರಿಕ ಪ್ರಮುಖರಾದ ಪುರುಷೋತ್ತಮ, ಸುರೇಶ್, ಉಪಸ್ಥಿತರಿದ್ದರು.
ವಿದ್ಯಾಭಾರತಿಗೆ ಒಳಪಟ್ಟ 34 ಸಂಸ್ಥೆಗಳಿಂದ ಸುಮಾರು 345 ಸ್ಪರ್ಧಾಳುಗಳು ಭಾಗವಹಿಸಿದ್ದು, ಮುಖ್ಯಶಿಕ್ಷಕಿ ವೀಣಾ ಆರ್ ಪ್ರಸಾದ್ ಸ್ವಾಗತಿಸಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹೆಚ್.ಕೆ.ಪ್ರಕಾಶ್ ವಂದಿಸಿದರು.
ಫಲಿತಾಂಶ : 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಶಕ್ತಿ ವಿದ್ಯಾಸಂಸ್ಥೆ, ಮಂಗಳೂರು ಪ್ರಥಮ, ಸರಸ್ವತಿ ಇಂಗ್ಲಿಷ್ ಮಾಧ್ಯಮ ಶಾಲೆ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಶಾರದಾ ಶುಭೋದಯ ಪ್ರಥಮ, ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆ ದ್ವಿತೀಯ, 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಶಾರದಾ ವಿದ್ಯಾನಿಕೇತನ ಪ್ರಥಮ, ಶಾರದಾ ಗಣಪತಿ ಕೈರಂಗಳ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಶ್ರೀದೇವಿ ಪ್ರೌಢಶಾಲೆ ಪ್ರಥಮ, ಜ್ಞಾನದೀಪ ಎಲಿಮಲೆ ದ್ವಿತೀಯ, 19ರ ವಯೋಮಾನದ ಬಾಲಕರ ವಿಭಾಗದಲ್ಲಿ ವಿವೇಕಾನಂದ ಕಾಲೇಜು ಪುತ್ತೂರು ಪ್ರಥಮ, ಶಾರದಾ ಪದವಿ ಪೂರ್ವಕಾಲೇಜು ಮಂಗಳೂರು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಕಾಲೇಜು ಪ್ರಥಮ, ಶಕ್ತಿ ಕಾಲೇಜು ಮಂಗಳೂರು, ಇಂದ್ರಪ್ರಸ್ಥ ಪದವಿ ಪೂರ್ವಕಾಲೇಜು ಉಪ್ಪಿನಂಗಡಿ ದ್ವಿತೀಯ ಸ್ಥಾನ ಗಳಿಸಿದೆ. ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.